ರೂ.5 ಲಕ್ಷ ಪರಿಹಾರ ವಿತರಣೆ

dhannur
Published on

ಬೀದರ್: ಬಸವಕಲ್ಯಾಣ ತಾಲೂಕಿನ ಧನ್ನೂರ(ಆರ್) ಗ್ರಾಮದ ಮುಲ್ಲಾಮರಿ ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದ ಮಲ್ಲಪ್ಪ ಶರಣಪ್ಪ ಕರೆಪನೋರ್ (25) ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ವಿತರಿಸಲಾಯಿತು.
ಡಿಸಿ ಕಚೇರಿಯಲ್ಲಿ ಮಲ್ಲಪ್ಪ ಅವರ ತಾಯಿ ನಾಗಮ್ಮಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚೆಕ್ ವಿತರಿಸಿ ಮಾತನಾಡಿ, ಯುವಕ ಮೃತಪಟ್ಟ ಸುದ್ದಿ ಕೇಳಿ ಬಹಳ ನೋವಾಗಿದೆ. ಮಳೆ ಸುರಿಯುತ್ತಿರುವ ವೇಳೆ ಜಾಗ್ರತೆ ವಹಿಸಬೇಕು. ಸ್ವಲ್ಪ ಆಯತಪ್ಪಿದರೂ ಇಂಥ ಘಟನೆಗಳು ಸಂಭವಿಸುತ್ತವೆ. ಹೀಗಾಗಿ ಗ್ರಾಮೀಣ ಜನ ಮಳೆಗಾಲದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಕೋರಿದರು.
ಜಿಲ್ಲಾಧಿಕಾರಿ ಗೋವಿಂದರಡ್ಡಿ ಮಾತನಾಡಿ, ಘಟನೆ ಬೆಳಕಿಗೆ ಬರುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ ಸತತ ಐದು ದಿನ ಊರಲ್ಲಿ ಮೊಕ್ಕಾಂ ಹೂಡಿ ಕಾರ್ಯಾಚರಣೆ ನಡೆಸಿದ್ದಾರೆ. ಇವರೊಂದಿಗೆ ಎಸ್.ಡಿಆರ್.ಎಫ್ ಸಹ ಶೋಧ ನಡೆಸಿದ್ದರಿಂದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆಯಾಗಿದೆ. ಸರ್ಕಾರದ ನಿಯಮದಂತೆ ಪರಿಹಾರ ವಿತರಿಸಲಾಗಿದೆ ಎಂದರು.
ಶಾಸಕ ಡಾ.ಸಿದ್ದು ಪಾಟೀಲ್, ಎಸ್ಪಿ ಚನ್ನಬಸವಣ್ಣ ಲಂಗೋಟಿ, ಗ್ರಾಪಂ ಸದಸ್ಯ ರಾಚಣ್ಣ ಸಾಹುಕಾರ, ಶ್ರೀನಾಥ ಪೊಲೀಸ್ ಪಾಟೀಲ್, ಡಿ.ಎನ್. ಪತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net