

ದಾಂಡೇಲಿ: ನಗರದಲ್ಲಿರುವ ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸಿದರೆ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯ ಎಷ್ಟು ಗೊತ್ತೆ?
ಸರಿಸುಮಾರು 3540 ಕೋಟಿ ರೂಪಾಯಿ!! ಹೌದು! ದಾಂಡೇಲಿಯ 31 ವಾರ್ಡ್ಗಳ ಪೈಕಿ ಬಹುತೇಕ ವಾರ್ಡಗಳಲ್ಲಿ ಅಕ್ರಮ ನಿವೇಶನಗಳಿವೆ. ಅತಿಕ್ರಮಣ ಮಾಡಲಾದ ಈ ನಿವೇಶನಗಳ ಒಟ್ಟಾರೆ ಪ್ರದೇಶ 250ಕ್ಕೂ ಹೆಚ್ಚು ಎಕರೆ ಎಂದು ಅಂದಾಜಿಸಲಾಗಿದೆ.
ಒಂದು ಎಕರೆ ಎಂದರೆ 40 ಗುಂಟೆ. 250 ಎಕರೆ ಎಂದರೆ 10,000 ಗುಂಟೆ. ಒಂದು ಗುಂಟೆಗೆ ಕನಿಷ್ಠ 3 ಲಕ್ಷ ರೂಪಾಯಿ ಎಂದು ಸಕ್ರಮ ಶುಲ್ಕ ದರ ನಿಗದಿ ಮಾಡಿದರೂ, ಇದರ ಒಟ್ಟಾರೆ ಮೊತ್ತವು ಮೂರು ಸಾವಿರ ಕೋಟಿ ರೂಪಾಯಿ ಆಗುತ್ತದೆ. ಇನ್ನು, ಈ ನಿವೇಶನಗಳ ಪೈಕಿ ಕೆಲವು ವಾಣಿಜ್ಯ ನಿವೇಶನಗಳಿವೆ. ಇವುಗಳ ಬೆಲೆ ಸಹಜವಾಗಿ ಹೆಚ್ಚು. ಹೀಗಾಗಿ, ಒಟ್ಟಾರೆಯಾಗಿ 3540 ಕೋಟಿ ರೂಪಾಯಿ ಆದಾಯವು ಈ ಸಕ್ರಮ ಪ್ರಕ್ರಿಯೆಯಿಂದ ಸರ್ಕಾರದ ಬೊಕ್ಕಸಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆೆ.
6000 ಅತಿಕ್ರಮಣ ಮನೆಗಳು: 1985ರಲ್ಲಿ ರಾಜ್ಯ ಸರ್ಕಾರದ ಅಧಿಸೂಚನೆಯಂತೆ ದಾಂಡೇಲಿಯ ನಗರ ಪ್ರದೇಶದ ಒಟ್ಟು ವಿಸ್ತೀರ್ಣ 1120 ಎಕರೆ ಎಂದು ಘೊಷಿಸಲಾಗಿತ್ತು. ಈ ಪ್ರದೇಶದಲ್ಲಿ ನಗರಸಭೆಯ ದಾಖಲಾತಿ ಪ್ರಕಾರ ಒಟ್ಟು 14,726 ಅಧಿಕೃತ ಮನೆಗಳಿವೆ. ನಂತರದಲ್ಲಿ ಸುಮಾರು 6000 ಮನೆಗಳು ಅತಿಕ್ರಮಣ ಜಾಗದಲ್ಲಿ ನಿರ್ವಿುಸಿದವುಗಳಾಗಿವೆ. ಇಲ್ಲಿ ವಾಸ ಮಾಡುವವರು ನಗರಸಭೆಗೆ ಕೇವಲ ಮನೆ ತೆರಿಗೆ ತುಂಬಿ, ವಿದ್ಯುತ್ ಸೌಕರ್ಯ ಪಡೆದು ವಾಸವಾಗಿದ್ದಾರೆ. ಇದರ ಹೊರತಾಗಿ ನಗರಸಭೆಗೆ ಇವುಗಳಿಂದ ಹೆಚ್ಚಿನ ಆದಾಯವಿಲ್ಲ. ನಗರಸಭೆ ದಾಖಲೆಯಲ್ಲಿ ಈ ರಹವಾಸಿಗಳು ಉಪಭೋಗದಾರರೆಂದು ಮಾತ್ರ ದಾಖಲಾತಿ ಇದೆ. 30-40 ವರ್ಷದಿಂದ ಈ ಮನೆಗಳಲ್ಲಿ ವಾಸವಿದ್ದರೂ, ಮಾಲೀಕತ್ವದ ಖಾತೆಯಲ್ಲಿ ಇವರ ಹೆಸರಿಲ್ಲ, ಸರ್ಕಾರದ ದಾಖಲಾತಿ ನಮೂನೆಯ-13ರಲ್ಲಿ ಇವರ ಹೆಸರು ಬಂದು ಈ ಸಮಸ್ಯೆಯನ್ನು ಸರಿಪಡಿಸಬೇಕಾಗಿದೆ.
6000 ಮನೆಗಳ ಜಾಗವನ್ನು ಸಕ್ರಮಗೊಳಿಸಲು ಸರ್ಕಾರವು ಹಣ ನಿಗದಿಪಡಿಸಿ ಭರಣ ಮಾಡಿಸಿಕೊಳ್ಳಬೇಕು ಮತ್ತು ಈ ಸಮಸ್ಯೆಗೆ ಅಂತಿಮ ಪರಿಹಾರ ದೊರಕಿಸಿಕೊಡಬೇಕು. ಈ ಮೂಲಕ ಅಪಾರ ಪ್ರಮಾಣದ ಆದಾಯ ಪಡೆಯುವತ್ತ ಸರ್ಕಾರ ಚಿತ್ತ ಹರಿಸಬೇಕಾಗಿದೆ ಎಂಬುದು ಪ್ರಜ್ಞಾವಂತರ ಅನಿಸಿಕೆಯಾಗಿದೆ. ಇದು ನಗರದ ಈ 6000 ಮನೆಗಳಲ್ಲಿ ಬಹುತೇಕವಾಗಿ ವಾಸಿಸುವ ಬಡ ಕೂಲಿಕಾರರ, ಕಾರ್ವಿುಕರ ಬೇಡಿಕೆಯೂ ಆಗಿದೆ.
ಜೈನ್ ವರದಿ ಮೂಲೆಗುಂಪು: 2007ರಲ್ಲಿ ಹಳಿಯಾಳದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಕಾಳಿ ನದಿಯ ನೀರನ್ನು ಹರಿಬಿಡುವ ವೇಳೆ ನಗರದ ವಸ್ತು ಸ್ಥಿತಿ ಪರಿಶೀಲಿಸಿ ಸರ್ಕಾರದ ಹಿರಿಯ ಅಧಿಕಾರಿ ಮಹೇಂದ್ರ ಜೈನ್ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯಲ್ಲಿಯೂ ಸರ್ಕಾರದ ಆದಾಯ ಹೆಚ್ಚಿಸಲು ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಜೈನ್ ಉಲ್ಲೇಖಿಸಿದ್ದರು. ಈ ವರದಿ ಸರ್ಕಾರದ ಕಪಾಟುಗಳಲ್ಲಿ ಮೂಲೆಗುಂಪಾಗಿ ಧೂಳು ತಿನ್ನುತ್ತಿದೆ. ಅಲ್ಲದೆ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ.
ಸರ್ಕಾರವು ಅಕ್ರಮ ಸಕ್ರಮಕ್ಕೆ ಚಾಲನೆ ನೀಡಿದರೆ ಇದೊಂದು ಉತ್ತಮ ನಡೆ ಆಗುವುದರಲ್ಲಿ ಸಂಶಯವಿಲ್ಲ. ಸಕ್ರಮಗೊಳಿಸಿದರೆ ಹಳೆಯ ಅಕ್ರಮ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲು ಅನುವಾಗುತ್ತದೆ. ಇವುಗಳಿಗೆ ದೊರಕುವ ಬ್ಯಾಂಕ್ ಸಾಲ ಸೌಲಭ್ಯದಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ವ್ಯವಹಾರ ವಹಿವಾಟು ನಡೆದು, ಆರ್ಥಿಕ ಪ್ರಗತಿಗೆ ಅನುಕೂಲವಾಗುತ್ತದೆ. ಈ ಮೂಲಕ ನಗರದ ಅಭಿವೃದ್ಧಿಯ ಹೆಬ್ಬಾಗಿಲು ತೆರೆದುಕೊಳ್ಳುತ್ತದೆ. | ಇಸಾ ಎಂಟೊನಿ ಆರೋಗುಮ್ ಉದ್ದಿಮೆದಾರ ಮತ್ತು ಅಕ್ರಮ ಸಕ್ರಮದ ಹೋರಾಟಗಾರ
ಅತಿಕ್ರಮಣ ಜಾಗದ ಸಕ್ರಮ ಮತ್ತು ಲೀಜ್ ಜಾಗದಲ್ಲಿ ವಾಸಿಸುವವರಿಗೆ ಮಾಲೀಕತ್ವ ನೀಡಲು ಕಾನೂನಾತ್ಮಕ ಅಡೆತಡೆಗಳ ನಿವಾರಣೆ ಆಗಬೇಕು. ನಗರಸಭೆಯಿಂದಲೂ ಈ ಕುರಿತು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ನಗರಸಭೆಯಿಂದ ಸರ್ಕಾರದ ನಿರ್ಧಾರದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಡಾ. ಸೈಯದ್ ಜಾಹೇದ ಅಲಿ ಪೌರಾಯುಕ್ತರು, ನಗರಸಭೆ ದಾಂಡೇಲಿ