

ಬೀದರ್: ಜಿಲ್ಲಾ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಎರಡು ಪ್ರತ್ಯೇಕ ಪ್ರಕಣಗಳಲ್ಲಿ 1.50 ಕೋಟಿ ಮೌಲ್ಯದ 150 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ಐಜಿಪಿ ಅನುಪಮ್ ಅಗ್ರವಾಲ್ ತಿಳಿಸಿದರು.
ಸೋಮವಾರ ಔರಾದ್ ತಾಲೂಕಿನ ಏಕಂಬಾ ಚೆಕ್ಪೋಸ್ಟ್ ಹತ್ತಿರ ತೆಲಂಗಾಣದಿಂದ ಜಿಲ್ಲೆಗೆ ಸಾಗಿಸುತ್ತಿರುವ ಮಾಹಿತಿ ಮೇರೆಗೆ ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ ನೇತೃತ್ವದ ತಂಡ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ 1.30 ಕೋಟಿ ಮೌಲ್ಯದ 130 ಕೆಜಿ ಗಾಂಜಾ, 2 ಲಕ್ಷ ರೂ. ವಾಹನ ಮತ್ತು ಎರಡು ಮೊಬೈಲ್ ವಶಪಡಿಸಿಕೊಂಡಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತೆಲಂಗಾಣ ಮೂಲದ ವ್ಯಕ್ತಿ ಬೀದರ್ ನಿಂದ ಹುಮನಾಬಾದ್ ಗೆ ಬಸ್ ನಲ್ಲಿ ಗಾಂಜಾ ಸಾಗಿಸುತ್ತಿರುವ ಮಾಹಿತಿ ಆಧರಿಸಿ ಸಿಪಿಐ ಶರಣಪ್ಪ ಕೋಡ್ಲಾ ಟೀಮ್ ದಾಳಿ ನಡೆಸಿ ಒಬ್ಬನನ್ನು ಬಂಧಿಸಿ 20.20 ಲಕ್ಷದ 20 ಕೆಜಿ ಗಾಂಜಾ ಮತ್ತು ಮೊಬೈಲ್, 900 ರೂ. ನಗದು ಜಪ್ತಿ ಮಾಡಿಕೊಂಡಿದೆ ಎಂದರು.
ಬೀದರ್ ಜಿಲ್ಲೆ ತೆಲಂಗಾಣ ಮತ್ತು ಮಹಾರಾಷ್ಟ್ರ ಗಡಿ ಹಂಚಿಕೊಂಡಿದ್ದರಿಂದ ಮಾದಕ ವಸ್ತುಗಳು ಹೆಚ್ಚಾಗಿ ಸಾಗಿಸುವ ಸಂಭವವಿದೆ. ಹೀಗಾಗಿ ಜಿಲ್ಲೆಯ ಪೊಲೀಸರು ಅಕ್ರಮ ಸಾಗಣೆ ಮೇಲೆ ಹದ್ದಿನ ಕಣ್ಣಿಟ್ಟಿದೆ. ಕಳೆದ ಮೂರು ತಿಂಗಳಲ್ಲಿ 11 ಪ್ರಕರಣಗಳಲ್ಲಿ 800 ಕೆಜಿ ಗಾಂಜಾ ವಶಪಡಿಸಿಕೊಂಡು 34 ಜನರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಎಸ್ಪಿ ಚನ್ನಬಸವಣ್ಣ ಎಸ್.ಲಂಗೋಟಿ ಮಾತನಾಡಿ, ಜಿಲ್ಲಾದ್ಯಂತ ಇತ್ತೀಚೆಗೆ ಮಾದಕ ವಸ್ತುಗಳ ಸಾಗಣೆ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಆಂತರಿಕ ಮಾಹಿತಿ ಪಡೆದು ಭೇದಿಸುತ್ತಿದೆ. ಅದರೊಂದಿಗೆ ರೌಡಿ ನಿಗ್ರಹ ದಳ, ಮಾದಕ ವಸ್ತುಗಳ ನಿಗ್ರಹ ದಳ ಕಾರ್ಯಾಚರಣೆ ಮಾಡುತ್ತಿವೆ. ತಂಡದಲ್ಲಿ ನುರಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ ಎಂದು ಹೇಳಿದರು.
ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಭಾಲ್ಕಿ ಎಎಸ್ಪಿ ಪೃಥ್ವಿಕ್ ಶಂಕರ, ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ ಇತರರಿದ್ದರು.