ರೂ.1.23 ಕೋಟಿ ಮೌಲ್ಯದ ಗಾಂಜಾ ಜಪ್ತಿ

SP
Published on

ಬೀದರ್: ನೆರೆಯ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು, 1.23 ಕೋಟಿ ಮೌಲ್ಯದ 118 ಕೆಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ಬೀದರ್ ನಿಂದ ಹುಮನಾಬಾದ್ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತ್ತಿರುವ ಮಾಹಿತಿ ಮೇರೆಗೆ ಖಾಕಿಪಡೆ ಹುಮನಾಬಾದ್ನ ರಾಮ್ ಆ್ಯಂಡ್ ರಾಜ್ ಕಾಲೇಜು ಬಳಿ ಬಂಧಿಸಿದೆ ಎಂದು ಎಸ್ಪಿ ಚನ್ನಬಸವಣ್ಣ ಲಂಗೋಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರಲ್ಲಿ ಒಬ್ಬ ಕರ್ನಾಟಕ, ಇನ್ನೊಬ್ಬ ಉತ್ತರ ಪ್ರದೇಶ ಮೂಲದ ಮಹಾರಾಷ್ಟ್ರ ನಿವಾಸಿ. ಬಂಧಿತರಿಂದ ಗಾಂಜಾ ಜತೆಯಲ್ಲಿ ಒಂದು ಮಾರುತಿ ಸುಜುಕಿ ಕಾರು, 3 ಮೊಬೈಲ್ ಮತ್ತು 15 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲ ಅಧಿಕಾರಿ, ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದು, ಇವರ ಕೆಲಸ ಮೆಚ್ಚಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಬಹುಮಾನ ವಿತರಿಸಲಿದ್ದಾರೆ ಎಂದರು.
ಎರಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಸಾಗಣೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 16 ಅಕ್ರಮ ಗಾಂಜಾ ಸಾಗಣೆ ಪ್ರಕರಣ ನಡೆದಿದ್ದು, 10.17 ಕೋಟಿ ಮೌಲ್ಯದ 1,017 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಹಿರಿಯ ಸಹಾಯಕ ಪೊಲೀಸ್ ಅಕ್ಷಕ ಶಿವಾಂಶು ರಾಜಪುತ, ಸಿಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್ಐಗಳಾದ ಸುರೇಶ ಹಜ್ಜರಗಿ, ಬಸವರಾಜ ಇತರರಿದ್ದರು.


ಮಫ್ತಿಯಲ್ಲಿ ಠಾಣೆ ಕಾರ್ಯ ಪರಿಶೀಲನೆ
ಜಿಲ್ಲೆಯ ಠಾಣೆಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೋ ಇಲ್ಲವೋ ಎಂಬ ಮಾಹಿತಿ ಪಡೆಯಲು ಮಫ್ತಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಮುಂದಾಗಿದೆ. 29 ಸಿಬ್ಬಂದಿ ಜಿಲ್ಲೆಯ 29 ಠಾಣೆಗಳಿಗೆ ತೆರಳಿ ವಿವಿಧ ರೀತಿಯ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿತ್ತು. ಅವರು ತೆರಳಿದ 29 ಠಾಣೆ ಪೈಕಿ 20ರ ಸಿಬ್ಬಂದಿ ಉತ್ತಮವಾಗಿ ಸ್ಪಂದಿಸಿ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಆದರೆ ಉಳಿದ 9 ಠಾಣೆಗಳಲ್ಲಿ ಪ್ರಕರಣ ದಾಖಲಿಸಲು ನಿರಾಕರಿಸಿದರು. ಅವರಲ್ಲೂ ತಿಳಿವಳಿಕೆ ಮೂಡಿಸಲಾಗಿದೆ ಎಂದು ಎಸ್ಪಿ ಲಂಗೋಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net