

ಬೀದರ್: ಗುರುಪೂರ್ಣಿಮೆ ಹಾಗೂ ಡಾ. ಬಸವಲಿಂಗ ಅವಧೂತರ 47ನೇ ಜನ್ಮದಿನವನ್ನು ನೆರೆಯ ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದಲ್ಲಿ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.
47ನೇ ಜನ್ಮದಿನದ ಪ್ರಯುಕ್ತ ಆಶ್ರಮದ ಆವರಣದಲ್ಲಿ ವಿವಿಧ ಬಗೆಯ 47 ಸಸಿಗಳನ್ನು ನೆಡಲಾಯಿತು. ಮುತ್ತೈದೆಯರಿಂದ ಶ್ರೀಗಳ ತೊಟ್ಟಿಲು, ರುದ್ರಾಕ್ಷಿಯಿಂದ ತುಲಾಭಾರ ಮಾಡಲಾಯಿತು.
ಶ್ರೀಗಳ ಪಾದಪೂಜೆ, ಲಕ್ಷ ದೀಪೋತ್ಸವ, ಅನ್ನ ದಾಸೋಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಶ್ರಮದಲ್ಲಿ ಭಕ್ತಿಯ ವಾತಾವರಣ ಸೃಷ್ಟಿಸಿದವು.
ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಮಲ್ಲಿಕಾರ್ಜುನ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರು ದಾರಿಯಲ್ಲಿ ಹೂವು ಚೆಲ್ಲಿ ಸ್ವಾಗತಿಸಿ ಅವರನ್ನು ಮುಖ್ಯ ವೇದಿಕೆಗೆ ಬರಮಾಡಿಕೊಂಡರು. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದ ವಿವಿಧೆಡೆಯ ರಾಜಕೀಯ ಗಣ್ಯರು, ಮಠಾಧೀಶರು, ಮುಖಂಡರು ಸೇರಿದಂತೆ ಅಪಾರ ಭಕ್ತರು ಅಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಗುರುವಿನ ಋಣ ಮರೆಯದಿರಿ: ಭಕ್ತರ ಅಜ್ಞಾನ, ಅಂಧಕಾರ ಕಳೆಯವವನು ಹಾಗೂ ದೇವರನ್ನು ತೋರುವವನೇ ಗುರು. ಗುರುವಿನ ಋಣವನ್ನು ಯಾರೂ ಮರೆಯಬಾರದು ಎಂದು ಡಾ. ಬಸವಲಿಂಗ ಅವಧೂತರು ಹೇಳಿದರು.
ಗುರು ಭಕ್ತರ ಉದ್ಧಾರವನ್ನೇ ಬಯಸುತ್ತಾನೆ. ಸದಾ ಸನ್ಮಾರ್ಗ ತೋರುತ್ತಾನೆ. ಕಾರಣ, ಗುರು ಹಾಕಿಕೊಟ್ಟ ದಾರಿಯಲ್ಲೇ ಸಾಗಬೇಕು ಎಂದರು.
ಮಾನವ ಜನ್ಮ ಬಹಳ ಅಮೂಲ್ಯವಾಗಿದೆ. ಅದನ್ನು ವ್ಯರ್ಥ ಮಾಡಿಕೊಳ್ಳಬಾರದು. ದುಶ್ಚಟಗಳಿಂದ ದೂರ ಇರಬೇಕು. ಸತ್ಕಾರ್ಯಗಳನ್ನು ಮಾಡಬೇಕು. ತಂದೆ- ತಾಯಿ, ಗುರುವಿಗೆ ಕೃತಜ್ಞರಾಗಿರಬೇಕು. ಈ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜನ್ಮದಿನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಮಾಜಮುಖಿ ಚಟುವಟಿಕೆಗಳೊಂದಿಗೆ ಆಚರಿಸಬೇಕು. ಆಡಂಬರದ ಆಚರಣೆಗಳಿಂದ ಏನೂ ಉಪಯೋಗ ಇಲ್ಲ ಎಂದು ನುಡಿದರು.
ಬಡವರಿಗೆ ಅನ್ನದಾನ, ವಸ್ತ್ರದಾನ, ಚಿಕಿತ್ಸೆಗೆ ನೆರವು ಮೊದಲಾದ ಮಾನವೀಯ ಕಾರ್ಯಗಳ ಮೂಲಕ ಜನ್ಮದಿನ ಆಚರಿಸುವಂತಾಗಬೇಕು ಎಂದರು.