ರುದ್ರಾಕ್ಷಿ ಶಿವಲಿಂಗಕ್ಕೆ ಪೂಜಾ ಕೈಂಕರ್ಯ

18blrp7
ಬೇಲೂರಿನ ಪ್ರಜಾಪಿತ ಬ್ರಹ್ಮಕುಮಾರಿ ಸಮಾಜ ಸೇವಾ ಕೇಂದ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಸಾವಿರಾರು ರುದ್ರಾಕ್ಷಿಗಳನ್ನು ಬಳಸಿ ಶಿವಲಿಂಗ ನಿರ್ಮಿಸಿ ಪೂಜಿಸಲಾಯಿತು.
Published on

ಬೇಲೂರು: ಪಟ್ಟಣದ ವಿಷ್ಣುಸಮುದ್ರ ಕೆರೆ ದಡದಲ್ಲಿರುವ ಬ್ರಹ್ಮಕುಮಾರಿ ಸಮಾಜದ ಸೇವಾ ಕೇಂದ್ರದ ಕಾರ್ಯಕರ್ತರು ಮಹಾಶಿವರಾತ್ರಿ ಅಂಗವಾಗಿ ಸಾವಿರಾರು ರುದ್ರಾಕ್ಷಿಗಳನ್ನು ಬಳಸಿ ಶಿವಲಿಂಗ ನಿರ್ಮಿಸಿ ಶನಿವಾರ ಮುಂಜಾನೆಯಿಂದಲೇ ಧ್ಯಾನ, ಪೂಜಾ ಕೈಂಕರ್ಯ ನಡೆಸಿದರು.

ಪುರಸಭಾ ಮಾಜಿ ಅಧ್ಯಕ್ಷ ಸಿ.ಎನ್.ದಾನಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಶಾಂತಿ ತುಂಬಿರುವ ನಮ್ಮ ಸಮಾಜದಲ್ಲಿ ಶಾಂತಿಯ ವಾತಾವರಣ ಸೃಷ್ಟಿಸುವಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಸಮಾಜದ ಸೇವಕರು ಶ್ರಮಿಸುತ್ತಿದ್ದು, ಜನರಿಗೆ ಜ್ಞಾನದೊಂದಿಗೆ ಭಕ್ತಿಯ ಸಾಗರವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.

ಪ್ರಜಾಪಿತ ಬ್ರಹ್ಮಕುಮಾರಿ ಸೇವಾ ಕೇಂದ್ರದ ಸಂಚಾಲಕ ವಿನೋದ ಮಾತನಾಡಿ, ಮಹಾಶಿವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ರುದ್ರಾಕ್ಷಿ ಶಿವಲಿಂಗ ಸ್ಥಾಪಿಸಿ ವಿಶೇಷ ಪೂಜೆಗಳನ್ನು ಮಾಡುತ್ತಿದ್ದೇವೆ. ಹಬ್ಬಗಳನ್ನು ಎಲ್ಲರೂ ಆಚರಿಸುತ್ತಾರೆ. ಅದರಂತೆ ಶಿವರಾತ್ರಿ ಹಬ್ಬದ ಆಚರಣೆಯ ಜತೆಗೆ, ಆಧ್ಯಾತ್ಮಿಕ ರಹಸ್ಯ ತಿಳಿಯುವುದು ಪ್ರಮುಖವಾಗಿದೆ. ಶಿವರಾತ್ರಿಯಲ್ಲಿ ರಾತ್ರಿ ಎಂಬ ಪದವು ಅಜ್ಞಾನದ ಅಂಧಕಾರ ಹಾಗೂ ಅಧರ್ಮದಿಂದ ತುಂಬಿದ ಕತ್ತಲನ್ನು ಸೂಚಿಸುತ್ತದೆ. ವರ್ತಮಾನ ಸಭೆಯಲ್ಲಿ ನೈತಿಕ ಮಾನವೀಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಘೋರ ಅವಹೇಳನವಾಗುತ್ತಿದೆ. ಧರ್ಮ ಸೂಕ್ಷ್ಮತೆಯನ್ನು ಪ್ರತಿಯೊಬ್ಬರೂ ತಿಳಿದು ಜೀವನ ನಡೆಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದರು.

ಪ್ರಜಾಪಿತ ಬ್ರಹ್ಮಕುಮಾರಿ ಸಮಾಜದ ಹಿರಿಯರಾದ ನೀಲಮ್ಮ, ಮಹಾಲಕ್ಷ್ಮೀ, ಸುಶೀಲಮ್ಮ, ಗಂಗಾಧರ, ಎನ್.ಅನಂತು, ಬಾಬಣ್ಣ, ಲಲಿತಮ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನಾಧಿಕಾರಿ ಸಂಧ್ಯಾಶೆಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net