ರು. 3000 ಕೋಟಿ ಪೂರ್ಣ ಖರ್ಚಾಗಲಿ

1204Klb07
ಕಲಬುರಗಿಯ ಕೆಕೆಆರ್ಡಿಬಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿದರು. ಆರ್.ವೆಂಕಟೇಶಕುಮಾರ, ಯಶವಂತ ಗುರುಕರ್, ಡಾ.ದಿಲೀಷ್ ಶಶಿ ಇದ್ದರು.
Published on

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್​ಡಿಬಿ)ಗೆ 2022-23ನೇ ಸಾಲಿಗೆ ರಾಜ್ಯ ಸರ್ಕಾರ 3000 ಕೋಟಿ ರೂ. ಅನುದಾನ ನೀಡಿದೆ. ಕ್ರಿಯಾಯೋಜನೆಗೆ ಏಪ್ರಿಲ್​ನಲ್ಲೇ ಅನುಮೋದನೆ ಪಡೆದು ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಸೂಚಿಸಿದರು.

ಮಂಡಳಿ ಕಚೇರಿಯಲ್ಲಿ ಮಂಗಳವಾರ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ 3000 ಕೋಟಿ ರೂ. ಸಮರ್ಪಕವಾಗಿ ವಿನಿಯೋಗಿಸಬೇಕು. ಜಿಲ್ಲಾಧಿಕಾರಿ, ಶಾಸಕರನ್ನು ಸಂಪರ್ಕಿಸಿ ಕ್ರಿಯಾಯೋಜನೆಗೆ ಪ್ರಸ್ತಾವನೆ ಪಡೆದು ಏಪ್ರಿಲ್​ನಲ್ಲೇ ಮಂಡಳಿಗೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂದರು.

ಜಿಲ್ಲೆಯಲ್ಲಿ 2016-17ರ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಮಂಡಳಿ ವ್ಯಾಪ್ತಿಯ ಇತರ ಜಿಲ್ಲೆಗಳಲ್ಲಿ ಉತ್ತಮ ಪ್ರಗತಿ ಕಾಣಲಾಗುತ್ತಿದೆ. ಆದರೆ ಕಲಬುರಗಿಯಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂದು ಅನುಷ್ಠಾನ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮಂಡಳಿ ಕಾರ್ಯದರ್ಶಿ ಆರ್. ವೆಂಕಟೇಶಕುಮಾರ ಮಾತನಾಡಿ, 2022-23ನೇ ಸಾಲಿಗೆ ಜಿಲ್ಲೆಗಳು ಕ್ರಿಯಾಯೋಜನೆ ಸಲ್ಲಿಸಬೇಕು. ಬದಲಾವಣೆಗಳಿದ್ದರೆ 30ರೊಳಗೆ ಪ್ರಸ್ತಾವನೆ ಸಲ್ಲಿಸಿ ಸರಿಪಡಿಸಿ ಕಾಮಗಾರಿ ಆರಂಭಿಸಬೇಕು. ಜಿಲ್ಲಾಧಿಕಾರಿಗಳು ಪ್ರತಿ ವಾರ ಮಂಡಳಿ ಕಾಮಗಾರಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.

ಕೊಪ್ಪಳ, ಬಳ್ಳಾರಿ, ಯಾದಗಿರಿಯಲ್ಲಿ ಕೆಲಸವಾಗುತ್ತಿದೆ. ಕಲಬುರಗಿಯಲ್ಲಿ ಏಕೆ ನಿಧಾನಗತಿ? ಟೆಂಡರ್ ಕರೆಯುವ ಅಧಿಕಾರ ಅನುಷ್ಠಾನ ಏಜೆನ್ಸಿಗಳಿಗೆ ನೀಡಲಾಗಿದೆ. ಮಂಡಳಿಯಲ್ಲಿ ಕೆಲಸ ತಡವಾಗುತ್ತಿಲ್ಲ. ಪ್ರಸ್ತಾವನೆ ಬಂದ ದಿನವೇ ಅಥವಾ ಮರುದಿನ ಅನುಮೋದಿಸಲಾಗುತ್ತಿದೆ. ಆದರೂ ಪ್ರಗತಿ ಕಾಣುತ್ತಿಲ್ಲ. ಎರಡ್ಮೂರು ವರ್ಷವಾದ ನಂತರ ಕೆಲಸ ಬದಲಾವಣೆಗೆ ಪ್ರಸ್ತಾವನೆ ಎಂದರೆ ಹೇಗೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಯಶವಂತ ಗುರುಕರ್, ಜಿಪಂ ಸಿಇಒ ಡಾ.ದಿಲೀಷ್ ಶಶಿ, ಉಪ ಕಾರ್ಯದರ್ಶಿ ರಾಚಪ್ಪ, ಜಂಟಿ ನಿರ್ದೇಶಕಿ ಪ್ರವೀಣಪ್ರಿಯಾ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಪಾಲಿಕೆ ಆಯುಕ್ತ ಡಾ.ಶಂಕರ ವಣಿಕ್ಯಾಳ ಇತರರಿದ್ದರು.

ಕಲ್ಯಾಣ ಕನರ್ಾಟಕ ಪ್ರದೇಶದ ಒಳಿತಿಗಾಗಿ ಮಂಡಳಿ ಕೆಲಸ ಮಾಡುತ್ತಿದೆ. ಅಭಿವೃದ್ಧಿ ವೇಗ ಹೆಚ್ಚಿಸಬೇಕಿದೆ. ಅಧಿಕಾರಿಗಳ ನಿಧಾನಗತಿ ಕೆಲಸ, ಆಲಸ್ಯತನ ಸಹಿಸಲಾಗದು. ಕೆಲಸ ಮಾಡುವುದಾದರೆ ಇರಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ.
| ದತ್ತಾತ್ರೇಯ ಪಾಟೀಲ್ ರೇವೂರ ಕೆಕೆಆರ್​ಡಿಬಿ ಅಧ್ಯಕ್ಷ

ಪ್ರತಿ ತಿಂಗಳು ಮಂಡಳಿಯೇ ಎಲ್ಲ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಲಿದೆ. ಒಂದು ವಾರದಲ್ಲಿ ಪ್ರದೇಶದ ಉಳಿದ ಜಿಲ್ಲೆಗಳ ಪ್ರಗತಿ ಪರಿಶೀಲಿಸಲಾಗುವುದು. ಅನುಷ್ಠಾನ ಅಧಿಕಾರಿಗಳು ಪ್ರತಿ ಕಾಮಗಾರಿಯ ವಿವರ ಮಂಡಳಿ ವೆಬ್ ಪೋರ್ಟ್​ನಲ್ಲಿ ಸರಿಯಾಗಿ ಅಪ್ಲೋಡ್ ಮಾಡಬೇಕು.
| ಆರ್.ವೆಂಕಟೇಶಕುಮಾರ ಕೆಕೆಆರ್​ಡಿಬಿ ಕಾರ್ಯದರ್ಶಿ

ಏಪ್ರಿಲ್ 15 ಡೆಡ್ಲೈನ್: 2019-20ರ ಕ್ರಿಯಾ ಯೋಜನೆಯಡಿ ಮಂಜೂರಾಗಿ ಇದುವರೆಗೆ ಆಡಳಿತಾತ್ಮಕ ಅನುಮೋದನೆ ಪಡೆಯದ ಕಾಮಗಾರಿಗಳಿಗೆ 15ರೊಳಗೆ ಆಯಾ ಜಿಲ್ಲೆ ಡಿಸಿ ಮೂಲಕ ಪ್ರಸ್ತಾವನೆ ಸಲ್ಲಿಸಿ ಆಡಳಿತಾತ್ಮಕ ಅನುಮೋದನೆ ಪಡೆಯಬೇಕು. ಪ್ರಸ್ತಾವನೆ ಸಲ್ಲಿಸಿದ ದಿನವೇ ಅನುಮೋದನೆ ನೀಡಲಾಗುವುದು. ನಿಗದಿತ ಅವಧಿಯಲ್ಲಿ ಪ್ರಸ್ತಾವನೆ ಬಾರದಿದ್ದಲ್ಲಿ ಅಂತಹ ಕಾಮಗಾರಿ ಕೈಬಿಡಲಾಗುವುದು ಎಂದು ವೆಂಕಟೇಶಕುಮಾರ ಅನುಷ್ಠಾನ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net