

ಕಲಬುರಗಿL ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(ಕೆಕೆಆರ್ಡಿಬಿ)ಯಿಂದ ಕಲಬುರಗಿ ಜಿಲ್ಲೆ ಅಭಿವೃದ್ಧಿಗೆ ಪೂರಕವಾಗಿ ರೂಪಿಸಿರುವ 274.22 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ಕರೆದಿದ್ದ ಕೆಕೆಆರ್ಡಿಬಿ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಸಂಸದರು ಹಾಗೂ ಶಾಸಕರ ಜತೆ ಸಮಾಲೋಚನೆ ನಡೆಸಿದ ಅವರು, ಕ್ರಿಯಾಯೋಜನೆಗೆ ಅಸ್ತು ನೀಡುವ ಮೂಲಕ ಕರೊನೋತ್ತರ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಲು ಸಲಹೆ ನೀಡಿದರು.
ಮೈಕ್ರೋ ಹಾಗೂ ಮ್ಯಾಕ್ರೋ ಉಪ ಯೋಜನೆಯಡಿ ಸಾಮಾನ್ಯ ವರ್ಗಕ್ಕೆ 191.37 ಕೋಟಿ ರೂ., ಎಸ್ಸಿಪಿ ಉಪ ಯೋಜನೆಗೆ 77.30 ಕೋಟಿ ಹಾಗೂ ಟಿಎಸ್ಪಿ ಉಪ ಯೋಜನೆಯಡಿ 55.4 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು.
ಸಾಮಾಜಿಕ ವಲಯಕ್ಕೆ ಮೈಕ್ರೋ ಮತ್ತು ಮ್ಯಾಕ್ರೋದಡಿ ಸಾಮಾನ್ಯ ವರ್ಗಕ್ಕೆ 82.29 ಕೋಟಿ, ಎಸ್ಸಿಪಿ ಅಡಿ 33.23 ಕೋಟಿ, ಟಿಎಸ್ಪಿ ಅಡಿ 23.8 ಕೋಟಿ ರೂ. ವಿನಿಯೋಗಿಸಲಾಗುವುದು. ಸಾಮಾಜಿಕೇತರ ವಲಯಕ್ಕೆ ಸಾಮಾನ್ಯ ವರ್ಗಕ್ಕೆ 109 ಕೋಟಿ, ಎಸ್ಸಿಪಿ ಅಡಿ 44 ಕೋಟಿ ಹಾಗೂ ಟಿಎಸ್ಪಿ ಉಪ ಯೋಜನೆಗೆ 3.15 ಕೋಟಿ ರೂ. ಹೀಗೆ ನಿಯಮಾವಳಿಯಂತೆ ವಲಯವಾರು ಅನುದಾನ ಹಂಚಿಕೆ ಮಾಡಲಾಗಿದೆ. ಯೋಜನೆಗಳ ಸಮರ್ಪಕ ಅನುಷ್ಠಾನ ಮೂಲಕ ಕಲಬುರಗಿ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಪಡಿಸಬೇಕು. ಫಲಾನುಭವಿಗಳು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿಸಿಎಂ ಸಲಹೆ ನೀಡಿದರು.
ಬಳಿಕ ಕಲಬುರಗಿ ಜಿಲ್ಲೆಯ ಖನಿಜ ಪ್ರತಿಷ್ಠಾನ ಟ್ರಸ್ಟ್ ಸಮಿತಿ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಗಣಿ ಬಾಧಿತ ಪ್ರದೇಶ ಅಭಿವೃದ್ಧಿಗೆ ಡಿಎಂಎಫ್ ಅನುದಾನ ಬಳಸಬೇಕು ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಶರತ್ ಬಿ. ವಿಸ್ತೃತವಾಗಿ ವಿಷಯ ಮಂಡಿಸಿದರು.
ಸಂಸದ ಡಾ.ಉಮೇಶ ಜಾಧವ್, ವಿಧಾನಸಭೆ ಮುಖ್ಯ ಸಚೇತಕ ಡಾ.ಅಜಯಸಿಂಗ್, ಶಾಸಕರಾದ ಎಂ.ವೈ. ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ ಪಾಟೀಲ್ ತೆಲ್ಕೂರ, ಪ್ರಿಯಾಂಕ್ ಖರ್ಗೆ , ಸುಭಾಷ ಗುತ್ತೇದಾರ್, ಬಸವರಾಜ ಮತ್ತಿಮುಡ, ಕನೀಜ್ ಫಾತಿಮಾ, ಎಂಎಲ್ಸಿ ಬಿ.ಜಿ. ಪಾಟೀಲ್ ಇತರರಿದ್ದರು.