

ಕಮಲನಗರ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ಜಿಯಾವುಲ್ ಹಕ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ 2024-25ರ ವಿವಿಧ ಇಲಾಖೆಗಳಿಗೆ ತಾಪಂ ಲಿಂಕ್ ಕಾರ್ಯಕ್ರಮದಡಿ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು. ಶಿಕ್ಷಣ ಇಲಾಖೆ 24. 64 ಲಕ್ಷ, ಮಹಿಳಾ ಮತ್ತು ಮಕ್ಕಳ ಇಲಾಖೆ 24.64 ಲಕ್ಷ, ಗ್ರಂಥಾಲಯ 16.42 ಲಕ್ಷ, ಆರೋಗ್ಯ 16.42 ಲಕ್ಷ, ಸಂಪರ್ಕ 16.42 ಲಕ್ಷ ಇತರ 64,93,721 ರೂ. ಸೇರಿ 1.64 ಕೋಟಿ ರೂ. ಕ್ರಿಯಾಯೋಜನೆಗೆ ಸಮ್ಮತಿ ಸೂಚಿಸಲಾಯಿತು.
ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಯಾವುಲ್ ಹಕ್ ಹೇಳಿದರು.
ಸಿಡಿಪಿಒ ಇಮಲಪ್ಪಾ ಮಾತನಾಡಿ, ತಾಲೂಕಿನಲ್ಲಿರುವ 111 ಅಂಗನವಾಡಿ ಕೇಂದ್ರಗಳಲ್ಲಿ 17 ಖಾಸಗಿ ಕಟ್ಟಡದಲ್ಲಿ ಬಾಡಿಗೆ ಇವೆ ಎಂದು ತಿಳಿಸಿದರು. ಅದಕ್ಕೆ ಇಒ ಮಾಣಿಕರಾವ ಪಾಟೀಲ್ ಪ್ರತಿಕ್ರಿಯಿಸಿ, ನಮ್ಮ ತಾಲೂಕಿನಲ್ಲಿ ಕೆಲವೊಂದು ಕಡೆ ಅದ್ಭುತವಾದ ಅಂಗನವಾಡಿಗಳಿವೆ. ಆದರೆ ಮಕ್ಕಳಿಗೆ ತೆರಳಲು ಸರಿಯಾದ ಮಾರ್ಗವಿಲ್ಲ. ಕೆಸರಿನಿಂದ ಕೂಡಿದ ದಾರಿಯಲ್ಲಿ ಮಕ್ಕಳಿಗೆ ಹೋಗಲು ಕಷ್ಟವಾಗುತ್ತಿದ್ದು, ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಸಹಾಯಕ ನಿರ್ದೇಶಕ ಹಣಮಂತರಾಯ ಕೌಟಗೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಧಿಕಾರಿ ಸುಭಾಸ ದಾಲಗುಂಡೆ, ಪಶು ಸಂಗೋಪನೆ ಅಧಿಕಾರಿ ಡಾ. ಸುರೇಶ ಎಂ, ರೇಷ್ಮೆ ಇಲಾಖೆ ಅಧಿಕಾರಿ ಸಾಯಿನಾಥ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಕೊಟ್ರೇಶ ಐ, ಬಿಆರ್‌ಪಿ ಶಶಿಕುಮಾರ ಬಿಡವೆ, ತಾಪಂ ಸಿಬ್ಬಂದಿ ಪೀಟರ್, ವಿದ್ಯಾಸಾಗರ, ನೈಯುಮ್, ಗಣೇಶ, ನರೇಗಾ ಸಿಬ್ಬಂದಿಗಳಾದ ಐಇಸಿ ಸಂಯೋಜಕಿ ಸವಿತಾ ನಾಗೇಶ, ಟಿಎಂಐಎಸ್ ದಿನಕರ, ಡಿಇಒ ಸುವರ್ಣ, ಶ್ರೀದೇವಿ, ನೀತಿ ಆಯೋಗ ಸಂಯೋಜಕರಾದ ಅಮರ ಕೋಟೆ, ರಾಜೀವಗಾಂಧಿ ಯೋಜನೆಯ ಸಂಯೋಜಕ ಸಂಪತ್ ಇತರರಿದ್ದರು.