ತುಮಕೂರು: ರೀಲ್ಸ್ ವಿಚಾರಕ್ಕೆ ಪ್ರೇಮಿಗಳ ನಡುವೆ ಶುರುವಾದ ಜಗಳದಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತುಮಕೂರು ತಾಲೂಕು ಹೊಸಹಳ್ಳಿ ನಿವಾಸಿ, ಪದವಿ ವ್ಯಾಸಂಗ ಮಾಡುತ್ತಿದ್ದ ಚೈತನ್ಯ(22) ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಸೋಮವಾರ ರೀಲ್ಸ್ ಒಂದನ್ನು ಸ್ಟೇಟಸ್ನಲ್ಲಿ ಹಾಕಿದ ವಿಚಾರವಾಗಿ ಆಕೆಯನ್ನು ಪ್ರೀತಿಸುತ್ತಿದ್ದ ಪಕ್ಕದ ಊರಿನ ಕಾರು ಚಾಲಕ ವಿಜಯ್ ಕುಮಾರ್ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿ ಯುವತಿ ನೇಣಿಗೆ ಶರಣಾಗಿದ್ದಾಳೆ. ತಾಯಿ ಜತೆ ವಾಸವಾಗಿದ್ದ ಚೈತನ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಕರೆ ಮಾಡಿ ವಿಜಯ್ ಕುಮಾರ್ಗೆ ತಿಳಿಸಿದ್ದು, ಸಂಬಂಧಿಕರು ಬಂದು ನೋಡಿದಾಗ ನೇಣಿಗೆ ಶರಣಾಗಿ ಮೃತಪಟ್ಟಿರುವುದು ಖಚಿತವಾಗಿದೆ. ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬ "ಮೇಡಂ ನೀವು ಚೆನ್ನಾಗಿ ಕಾಣಿಸ್ತೀರಿ, ನಿಮ್ಮ ಫೋಟೋ ತೆಗೆಯಬಹುದೇ' ಎಂದು ಕೇಳಿ ತೆಗೆಯುವ 25 ಫೋಟೋ ರೀಲ್ಸ್ನ್ನು ಸ್ಟೇಟಸ್ಗೆ ಚೈತನ್ಯ ಹಾಕಿಕೊಂಡಿದ್ದರು. ಇದನ್ನು ನೋಡಿದ್ದ ಪ್ರೇಮಿ ವಿಜಯ್ ಆಕೆಯನ್ನು ಪ್ರಶ್ನಿಸಿದ್ದೇ ಆತ್ಮಹತ್ಯೆಗೆ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಚೈತನ್ಯಾ ಸಾವಿಗೆ ಆಕೆಯ ಪ್ರೇಮಿ ವಿಜಯ್ ಕುಮಾರ್ ಕಾರಣ ಎಂದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.