

ಕೋಲಾರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಲ ಮತ್ತು ಸಬ್ಸಿಡಿ ಯೋಜನೆಗಳನ್ನು ಬ್ಯಾಂಕ್‌ಗಳು ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೆ ಅರ್ಹ ಪಲಾನುಭವಿಗಳಿಗೆ ಸೌಲಭ್ಯ ಒದಗಿಸಬೇಕು ಎಂದು ಜಿಪಂ ಸಿಇಒ ಪದ್ಮಾಬಸವಂತಪ್ಪ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಗುರುವಾರ ಆಯೋಜಿಸಿದ್ದ ಡಿಸಿಸಿ(ಡಿಸ್ಟ್ರಿಕ್ಟ್ ಕನ್ಸಾಲ್ಟೇಟೀವ್ ಕಮಿಟಿ) ಮತ್ತು ಡಿಎಲ್‌ಆರ್‌ಸಿ(ಪ್ರಗತಿ ಪರಿಶೀಲನಾ ಸಮಿತಿ) ಸಭೆಯಲ್ಲಿ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿವೆ. ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇಂತಹ ಯೋಜನೆಗಳ ಬಗ್ಗೆ ಪೂರ್ಣವಾಗಿ ಮಾಹಿತಿ ಹೊಂದುವುದು ಅನಿವಾರ್ಯ. ಹಾಗೆಯೇ ಯೋಜನೆಗಳ ಲಾಭವನ್ನು ಪಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕ್ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಕೃಷಿ, ಶಿಕ್ಷಣಕ್ಕೆ ಹೆಚ್ಚಿನ ಸಾಲ ನೀಡುವ ಮೂಲಕ ರೈತರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಜಿಲ್ಲೆಯು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಪುಷ್ಪೋದ್ಯಮಕ್ಕೆ ಹೆಸರು ವಾಸಿಯಾಗಿರುವುದರಿಂದ ಈ ಕ್ಷೇತ್ರಗಳ ಪ್ರಗತಿಗೆ ಬ್ಯಾಂಕ್‌ಗಳು ಗಮನಹರಿಸಿ, ಹೆಚ್ಚಿನ ಸಾಲ ನೀಡಿದರೆ ಜಿಲ್ಲೆಯು ಆರ್ಥಿಕವಾಗಿ ಸದೃಢವಾಗಲಿದೆ ಎಂದು ತಿಳಿಸಿದರು.
ರಿಸರ್ವ್ ಬ್ಯಾಂಕ್ ಇಂಡಿಯಾದ ಪ್ರಾದೇಶಿಕ ಕೇಂದ್ರದ ಮ್ಯಾನೇಜರ್ ಜೀವಿಕಾ ಮಾತನಾಡಿ, ಗ್ರಾಹಕರ ಜತೆ ಉತ್ತಮ ಭಾಂದವ್ಯ ಹೊಂದುವ ಮೂಲಕ ಬ್ಯಾಂಕ್‌ಗಳ ಬಗ್ಗೆ ವಿಶ್ವಾಸ ಬರುವ ರೀತಿ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುದೀರ್ ಮಾತನಾಡಿ, ಪ್ರಸ್ತಕ ಆರ್ಥಿಕ ವರ್ಷದಲ್ಲಿ ಕೃಷಿ, ತೋಟಗಾರಿಕೆ, ಸಣ್ಣ, ಮಧ್ಯಮ ಕೈಗಾರಿಕೆ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಸಾಲ ನೀಡುವ ಬಗ್ಗೆ ಜಿಲ್ಲೆಯ ಬ್ಯಾಂಕ್ ಗಳಿಗೆ ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಜನರು ಸರ್ಕಾರದ ಯೋಜನೆಗಳ ಮೂಲಕ ಸಹಾಯಧನ ಮತ್ತು ಸಾಲ ಪಡೆಯಲು ಅರ್ಜಿ ಸಲ್ಲಿಸಿದರೆ, ಅದನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಅವರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕು ಎಂದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಸಹಾಯಕ ಮಹಾ ಪ್ರಬಂಧಕ ಎಂ.ಅಶೋಕ್ ಕುಮಾರ್, ನಬಾರ್ಡ್ನ ಡಿಡಿಎಂ ಎಂ.ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.