ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ ವಿತರಣೆ

31 NRD-1
Published on

ನರಗುಂದ: ತಾಲೂಕಿನ ರೈತರಿಗೆ ಪ್ರಸಕ್ತ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಬೇಕಾಗಿರುವ ಎಲ್ಲ ರೀತಿಯ ತಯಾರಿಗಳನ್ನು ಕೃಷಿ ಇಲಾಖೆಯಿಂದ ಈಗಾಗಲೇ ಮಾಡಿಕೊಳ್ಳಲಾಗಿದೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಔಷಧ, ರಸಗೊಬ್ಬರ ಸೇರಿ ವಿವಿಧ ಕೃಷಿ ಪರಿಕರಗಳನ್ನು ವಿತರಿಸಲಾಗುತ್ತಿದೆ. ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಹೇಳಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದಿಂದ ವಿತರಿಸಲಾಗುತ್ತಿರುವ ಪ್ರಸಕ್ತ ಮುಂಗಾರು ಹಂಗಾಮಿನ ಹೆಸರು ಬಿತ್ತನೆ ಬೀಜಗಳನ್ನು ಶನಿವಾರ ಪರಿಶೀಲಿಸಿ ಅವರು ಮಾತನಾಡಿದರು. ರೈತಸಂಪರ್ಕ ಕೇಂದ್ರ ಹಾಗೂ ತಾಲೂಕಿನಲ್ಲಿ ಎಲ್ಲ ಕೃಷಿ ಪರಿಕರ ಮಾರಾಟ ಮಳಿಗೆಗಳಲ್ಲಿ ಹತ್ತಿ ಬೀಜ ಸೇರಿ ವಿವಿಧ ಬೀಜಗಳನ್ನು ಅಗತ್ಯವಿರುವಷ್ಟು ದಾಸ್ತಾನು ಮಾಡಿಕೊಳ್ಳಲಾಗಿದೆ. ಕೊಣ್ಣೂರ ಮತ್ತು ನರಗುಂದ ರೈತಸಂಪರ್ಕ ಕೇಂದ್ರಗಳಲ್ಲಿ ಸಸ್ಯ ಸಂರಕ್ಷಣೆ ಔಷಧ, ಜೈವಿಕ ಕೀಟನಾಶಕಗಳು, ಔಷಧ ಸಿಂಪಡಣೆ ಯಂತ್ರಗಳು ಸೇರಿ ಅವಶ್ಯಕ ಕೀಟನಾಶಕ, ಕೃಷಿ ಉಪಕರಣಗಳು ಲಭ್ಯವಿದ್ದು, ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದರು.

ಹೆಸರು ಬಿತ್ತುವ ಮೊದಲು ರೈಜೋಬಿಯಂ ದ್ರವವನ್ನು ಪ್ರತಿ ಕೆಜಿ ಬೀಜಕ್ಕೆ 5 ರಿಂದ 10 ಮಿ.ಲೀ. ಬೆರೆಸಿ ಬೀಜೋಪಚಾರ ಮಾಡಬೇಕು. ಜೂನ್ ಮೊದಲ ವಾರದಿಂದ ಹೆಸರು ಬಿತ್ತನೆ ಕೈಗೊಳ್ಳುವುದು ಸೂಕ್ತ ಎಂದು ತಿಳಿಸಿದರು.

ಬದುವಿನಲ್ಲಿ ತೊಗರಿ ಬಿತ್ತಲು ಸಾಕಷ್ಟು ರೈತರಿಗೆ ಈಗಾಗಲೇ ಮನವಿ ಮಾಡಲಾಗಿದ್ದು, ಪ್ರತಿ 5 ಕೆಜಿ ಪ್ಯಾಕೆಟ್​ಗೆ ಸಾಮಾನ್ಯ ರೈತರಿಗೆ 250 ರೂ., ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ 188 ರೂ. ದರದಲ್ಲಿ ವಿತರಿಸಲಾಗುವುದು. ಯಾವುದೇ ಬೆಳೆಗಳಿಗೆ ಜೈವಿಕ ಗೊಬ್ಬರದಿಂದ ಬೀಜೋಪಚಾರ ಮಾಡಿದರೆ ರಸಗೊಬ್ಬರದ ಬಳಕೆ ಶೇ.25 ರಷ್ಟು ಕಡಿಮೆ ಮಾಡಬಹುದಾಗಿದೆ. ಇದರಿಂದ ಬೆಳೆ ಇಳುವರಿಯ ಮಟ್ಟವೂ ಹೆಚ್ಚಾಗುತ್ತದೆ ಎಂದು ತಿಳಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net