ರಿಯಲ್ ಎಸ್ಟೇಟ್‌ನಲ್ಲಿ ತೊಡಗಿದ್ದ ವ್ಯಕ್ತಿ ಕುತ್ತಿಗೆಗೆ ಇರಿದು ಹತ್ಯೆ, ಸಹೋದರರ ಜತೆ ಜಮೀನು ವಿವಾದ

22 Nela Ph 2 Police visit
Published on

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ಕತ್ತಿನ ಹಿಂಬದಿಗೆ ಚೂರಿಯಿಂದ ಇರಿದು ವ್ಯಕ್ತಿಯನ್ನು ಗುರುವಾರ ಬೆಳಗ್ಗೆ ಕೊಲೆ ಮಾಡಲಾಗಿದೆ.

ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಕಡಬಗೆರೆ ನಿವಾಸಿ ಸಿದ್ದಗಂಗಪ್ಪ (67) ಮೃತ.

ಗುರುವಾರ ಬೆಳಗ್ಗೆ 8.30ರಲ್ಲಿ ಮನೆ ಬಳಿಯ ವಸತಿ ಬಡಾವಣೆಯಲ್ಲಿ ಸಿದ್ದಗಂಗಪ್ಪ ವಾಯುವಿಹಾರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರನ್ನು ಸುತ್ತುವರಿದ ಮೂವರು ಆರೋಪಿಗಳು ಚೂರಿಯಿಂದ ಕತ್ತಿನ ಬಲ ಭಾಗಕ್ಕೆ ಇರಿದಿದ್ದಾರೆ. ಮನೆಯ ಬಳಿಯೇ ನಿಂತಿದ್ದ ಪತ್ನಿ ಗೀತಾ ಮತ್ತು ಪುತ್ರ ನಿರಂಜನ್ ಸ್ಥಳಕ್ಕೆ ಬರುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾದರು. ರಕ್ತಸ್ರಾವದಿಂದಾಗಿ ಸಿದ್ದಗಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಹೋದರರ ಜತೆ ಜಮೀನು ವಿವಾದ: ಗ್ರಾಮದ ಸರ್ವೇ.ನಂ 23/1 ಹಾಗೂ 24/1ರಲ್ಲಿರುವ 14 ಎಕರೆ ಭೂಮಿಯ ಪೈಕಿ 4.20 ಎಕರೆಯನ್ನು ಸಿದ್ದಗಂಗಪ್ಪ ತೆಗೆದುಕೊಂಡಿದ್ದರು. ಬಾಕಿ 9.20 ಎಕರೆ ಜಮೀನನ್ನು ಸಹೋದರರಿಗೆ ಹಂಚಿದ್ದರು. ಆದರೆ, ಸಿದ್ದಗಂಗಪ್ಪ ಅವರ ಸಹೋದರರು, ನಮ್ಮ ಭಾಗಕ್ಕೆ ಬಂದಿದ್ದ ಎಲ್ಲ ಜಮೀನು ಹಾಗೂ ಸಿದ್ದಗಂಗಪ್ಪ ಅವರ ಹೆಸರಿನಲ್ಲಿದ್ದ 2 ಎಕರೆ ಜಮೀನನ್ನು 2004ರಲ್ಲಿ ಮಾರಲು ಮುಂದಾಗಿದ್ದರು. ಈ ವೇಳೆ ಭೂಮಿಯನ್ನು ಮಾರಲು ಸಿದ್ದಗಂಗಪ್ಪ ನಿರಾಕರಿಸಿದ್ದರು.

4.20 ಎಕರೆ ಜಮೀನನ್ನು 2007ರಲ್ಲಿ ಭೂಪರಿವರ್ತನೆ ಮಾಡಿಸಿದ್ದ ಸಿದ್ದಗಂಗಪ್ಪ ವಸತಿ ಬಡಾವಣೆಯಾಗಿ ರೂಪಿಸಿದ್ದರು. ಇದೇ ವೇಳೆ ಪಾಪಣ್ಣ ಹಾಗೂ ಉಮೇಶ್ ಎಂಬುವರು ಸರ್ವೇ ನಂ.24/1ರಲ್ಲಿ ನಕಲಿ ದಾಖಲೆ ಸೃಷ್ಟಿಸಿ 2015ರಲ್ಲಿ 14 ನಿವೇಶನ ಮಾರಾಟ ಮಾಡಿದ್ದರು. ಇದು ಗೊತ್ತಾದ ಬಳಿಕ ಸಿದ್ದಗಂಗಪ್ಪ 2015ರಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಪ್ರಕರಣದ ವಿಚಾರಣೆ ಬಾಕಿ ಇರುವಂತೆ ಪಾಪಣ್ಣ ಹಾಗೂ ಉಮೇಶ್ ಅವರು 2016ರಲ್ಲಿ ಸಿದ್ಧಗಂಗಪ್ಪ ನಿರ್ಮಿಸಿದ್ದ ಬಡಾವಣೆಯ ತಡೆಗೋಡೆಯನ್ನು ತೆರವುಗೊಳಿಸಿದ್ದರು. ಈ ಬಗ್ಗೆ ಸಿದ್ದಗಂಗಪ್ಪ ಅವರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರದಲ್ಲಿ ಪ್ರಾಣಬೆದರಿಕೆ ಇತ್ತು ಎನ್ನಲಾಗಿದೆ.

ಬುಧವಾರ (ಏ.21) ಸಂಜೆ ಕೂಟ ಮೂವರು ಅಪರಿಚಿತರು ಬಂದು 14 ನಿವೇಶನಗಳು ನಮಗೆ ಸೇರಬೇಕು. ಅದನ್ನು ಬಿಟ್ಟುಕೊಡಬೇಕು. ಇಲ್ಲವಾದರೆ, ಪ್ರಾಣ ಕಳೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು ಸಿದ್ದಗಂಗಪ್ಪ ಕುಟುಂಬದವರು ತಿಳಿಸಿದ್ದಾರೆ.

ಪಾಪಣ್ಣ, ಉಮೇಶ್ ಮೇಲೆ ಶಂಕೆ: ನಾಲ್ಕೈದು ವರ್ಷಗಳಿಂದ ಬೆಂಗಳೂರಿನ ಪಾಪಣ್ಣ ಹಾಗೂ ಉಮೇಶ್ ಎಂಬುವರು ಸಿದ್ದಗಂಗಪ್ಪ ಅವರಿಗೆ ಮಾನಸಿಕವಾಗಿ ಸಾಕಷ್ಟು ಹಿಂಸೆ ಕೊಡುತ್ತಿದ್ದರು. ಜತೆಗೆ ಪ್ರಾಣ ಬೆದರಿಕೆ ಹಾಕುತ್ತಿದ್ದರು. ಈ ಇಬ್ಬರೇ ಸಿದ್ದಗಂಗಪ್ಪ ಅವರನ್ನು ಕೊಲೆ ಮಾಡಿಸಿರುವ ಸಾಧ್ಯತೆ ಇದೆ. ಆದ್ದರಿಂದ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿದ್ದಗಂಗಪ್ಪ ಅವರ ಕುಟುಂಬದವರು ಮನವಿ ಮಾಡಿಕೊಂಡಿದ್ದಾರೆ.

ಡಿವೈಎಸ್‌ಪಿ ಭೇಟಿ: ಸಿದ್ದಗಂಗಪ್ಪ ಕೊಲೆ ನಡೆದ ಸ್ಥಳಕ್ಕೆ ಡಿವೈಎಸ್‌ಪಿ ಎಚ್.ಸಿ. ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು. ಸಿಪಿಐ ಬಿ.ಎಸ್.ಮಂಜುನಾಥ್, ಪಿಎಸ್‌ಐ ಡಿ. ಮುರುಳೀಧರ್ ಮತ್ತಿತರರಿದ್ದರು. ಶ್ವಾನದಳವನ್ನು ಸ್ಥಳಕ್ಕೆ ಕರೆಸಲಾಗಿತ್ತು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net