

ಬೀದರ್: ಜಿಲ್ಲೆಯಲ್ಲಿ ಯಾವ ಕಾರಣಕ್ಕೂ ವಿನೋದಕೂಟ (ರಿಕ್ರಿಯೆಷನ್ ಸೆಂಟರ್/ಕ್ಯಾಸಿನೋ ತರಹ ) ಪ್ರಾರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವಕಾಶ ನೀಡಬಾರದು ಎಂದು ಕೇಂದ್ರದ ರಾಸಾಯಿನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಒತ್ತಾಯಿಸಿದ್ದಾರೆ.
ಒಂಬತ್ತು ವರ್ಷಗಳಿಂದ ನಾನು ಈ ವಿಷಯವಾಗಿ ಜಿಲ್ಲೆಯ ಎಲ್ಲ ಉಸ್ತುವಾರಿ ಸಚಿವರಿಗೆ ಆಗ್ರಹಿಸಿದ್ದೆ ಮತ್ತು ತೀವ್ರವಾಗಿ ವಿರೋಧಿಸಿದ್ದೆ. ಅದರಂತೆ ನನ್ನ ವಿರೋಧಕ್ಕೆ ಎಲ್ಲ ಸಚಿವರೂ ಸಹಕರಿಸಿದ್ದರು. ಒಬ್ಬರು ಕೆಲವೊಂದಿಷ್ಟು ದಿನ ಹಠ ಮಾಡಿ ಆ ಮೇಲೆ ಅದು ಸಾಧ್ಯವಾಗದ ಕಾರಣ ಕೈಬಿಟ್ಟರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಗಡಿ, ಹೆದ್ದಾರಿ ಪಕ್ಕದಲ್ಲಿ ವಿನೋದಕೂಟ ಪ್ರಾರಂಭಿಸಲು ತೆಲಂಗಾಣ ಮತ್ತು ಆಂಧ್ರಪ್ರದೇಶದ ಕೆಲವರು ಪ್ರಯತ್ನಿಸುತ್ತಿದ್ದಾರೆ. ಈ ಸಂಬಂಧ ಉಸ್ತುವಾರಿ ಸಚಿವರ ಮನೆ ಸುತ್ತ ಬ್ಯಾಗ್ ಹಿಡಿದು ಓಡಾಡುತ್ತಿರುವ ಮಾಹಿತಿ ಗಮನಕ್ಕೆ ಬಂದಿದೆ. ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ನನಗೆ ಈ ವಿಷಯದಲ್ಲಿ ಒಪ್ಪಿಸಲು ಆಂಧ್ರ ಮತ್ತು ತೆಲಂಗಾಣದ ಪ್ರಭಾವಿ ರಾಜಕಾರಣಿಗಳು ಒತ್ತಡ ಹೇರಿದ್ದರು. ಕೆಲವರಂತೂ ನವದೆಹಲಿಗೆ ಬಂದು ಪಕ್ಷದ ಹಲವು ನಾಯಕರಿಂದ ನನ್ನ ಮೇಲೆ ಒತ್ತಡ ಹಾಕಿದ್ದರು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಈ ಸೆಂಟರ್ ನಮ್ಮ ಜಿಲ್ಲೆಯಲ್ಲಿ ಯಾಕೆ ಎಂದು ಬೈದು ಕಳಿಸಿರುವೆ. ಇದರ ಹೊರತಾಗಿಯೂ ಹೈಕೋರ್ಟ್ ಆದೇಶವಿದೆ. ನೀವೇಕೆ ಅಡ್ಡಿಪಡಿಸುತ್ತಿದ್ದೀರಿ ಎಂದು ನನ್ನೊಂದಿಗೆ ವಾದಿಸಿದ್ದರು. ಅಷ್ಟಾದರೂ ನಮ್ಮವರ ಸುರಕ್ಷತೆಗಾಗಿ ಪ್ರಾರಂಭಿಸಲು ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.
ಇಂಥ ರಿಕ್ರಿಯೇಷನ್ ಸೆಂಟರ್ ಹೆಸರಿನಲ್ಲಿ ಕೇವಲ ಊಟೋಪಚಾರಕ್ಕೆಂದು ಸರ್ಕಾರದಿಂದ ಅನುಮತಿ ಪಡೆದು ಆ ಮೇಲೆ ಮಾಡಬಾರದ ಅನೈತಿಕ, ಅಕ್ರಮ ಚಟುವಟಿಕೆ ನಡೆಸುತ್ತಾರೆ. ಒಮ್ಮೆ ನಮ್ಮ ಯುವಕರು ಈ ಸೆಂಟರ್ ನಲ್ಲಿ ಕಾಲಿಟ್ಟರೆ, ಅಲ್ಲಿನ ಮೋಜು-ಮಸ್ತಿ ನೋಡಿ ಜೀವನವೇ ಬಲಿಕೊಡುವಷ್ಟು ಡೇಂಜರ್ ಇರುತ್ತದೆ ಎಂದು ಎಚ್ಚರಿಸಿದ್ದಾರೆ.
ಇಂಥ ಸೆಂಟರ್ ಗಳು ಬೇರೆ ರಾಜ್ಯಗಳಲ್ಲಿ ಹೇಗಿವೆ ಎಂಬುದನ್ನು ನೋಡಿರುವೆ. ಅಲ್ಲಿಯ ಯುವಕರ ಸಂಸ್ಕೃತಿಯನ್ನು ಕಂಡಿದ್ದೇನೆ. ಹೀಗಾಗಿ ಒಂಬತ್ತು ವರ್ಷದಿಂದ ಸೆಂಟರ್ ಪ್ರಾರಂಭಕ್ಕೆ ಅಡ್ಡಿ ಮಾಡುತ್ತಿರುವೆ. ಜಿಲ್ಲೆಯ ಜನರ, ಯುವಕರ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ರಿಕ್ರಿಯೇಷನ್ ಸೆಂಟರ್ ಪ್ರಾರಂಭಕ್ಕೆ ಒಪ್ಪಿಗೆ ನೀಡಬಾರದು ಎಂದು ಸಲಹೆ ನೀಡಿದ್ದಾರೆ.