ರಿಂಗ್ ರೋಡ್‌ಗೆ 140 ಕೋಟಿ ರೂ. ಬಿಡುಗಡೆ

Ring Road
ವರ್ತುಳ ರಸ್ತೆಯ ನಕ್ಷೆ
Published on

ಬೆಳಗಾವಿ: ನಗರದಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ 69.42 ಕಿ.ಮೀ. ವರ್ತುಳ ರಸ್ತೆ (ರಿಂಗ್ ರೋಡ್) ನಿರ್ಮಾಣಕ್ಕೆ ಭೂ ಸ್ವಾಧೀನದ 280 ಕೋಟಿ ರೂ. ಒಟ್ಟು ಮೊತ್ತದಲ್ಲಿನ ತನ್ನ ಪಾಲು 140 ಕೋಟಿ ರೂ.ವನ್ನು ರಾಜ್ಯ ಸರ್ಕಾರ ಈಚೆಗೆ ಬಿಡುಗಡೆ ಮಾಡಿದೆ.

ಗೋವಾ-ಬೆಂಗಳೂರು ಹಾಗೂ ಗೋವಾ- ಮುಂಬೈ ನಡುವೆ ಸಂಚರಿಸುವ ವಾಣಿಜ್ಯ ಉದ್ದೇಶದ ಭಾರಿ ವಾಹನಗಳು ಬೆಳಗಾವಿ ನಗರದ ಮೂಲಕವೇ ಸಂಚರಿಸುತ್ತಿವೆ. ಇದರಿಂದಾಗಿ ನಗರದೊಳಗಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಬೈಕ್, ಸಾರಿಗೆ ಬಸ್, ಇತರ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಇದನ್ನು ಮನಗಂಡಿರುವ ಸರ್ಕಾರ, 69.42 ಕಿ.ಮೀ. ಉದ್ದದ ವರ್ತುಳ ರಸ್ತೆ ನಿರ್ಮಿಸಲು ಮುಂದಾಗಿದೆ. ಸುಮಾರು 540 ಹೆಕ್ಟೇರ್ ಭೂಮಿ ಸ್ವಾಧೀನಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯ ಕ್ರಮ ವಹಿಸಿದೆ.

24 ಹಳ್ಳಗಳಲ್ಲಿ ಹಾದುಹೋಗುವ ರಸ್ತೆ: ಬೆಳಗಾವಿ ತಾಲೂಕಿನ ಸುಮಾರು 24 ಹಳ್ಳಿಗಳ ಮೂಲಕ ವರ್ತುಳ ರಸ್ತೆ ಹಾದುಹೋಗಲಿದೆ. ಗುರುತಿಸಿರುವ ಜಾಗದಲ್ಲಿ ಸರ್ಕಾರಿ ಪ್ರದೇಶಗಳ ಜತೆ ಖಾಸಗಿಯವರ ಜಮೀನುಗಳೂ ಸೇರಿವೆ. ಈ ರಸ್ತೆಯು 4 ಹಾಗೂ 6 ಪಥಗಳನ್ನು ಹೊಂದಿರಲಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸುಮಾರು 3.5 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ.

ಭೂ ಸ್ವಾಧೀನಕ್ಕೆ ಅಧಿಸೂಚನೆ: ಬೆಂಗಳೂರು -ಹುಬ್ಬಳ್ಳಿಯಿಂದ ಬರುವ ವಾಹನಗಳು ಬೆಳಗಾವಿ ಸಮೀಪದ ಹಲಗಾದಿಂದ ಎಡಕ್ಕೆ ತಿರುಗಿ ಮಚ್ಚೆ ಮಾರ್ಗವಾಗಿ ಗೋವಾ ಕಡೆ ಪ್ರಯಾಣ ಬೆಳೆಸಲು ಹಾಗೂ ಗೋವಾದಿಂದ -ಪುಣೆ ಮುಂಬೈ ಕಡೆ ಹೋಗುವ ವಾಹನಗಳಿಗಾಗಿ ಬೆಳಗಾವಿ ಪ್ರವೇಶದ ದ್ವಾರದಲ್ಲಿರುವ ಮಚ್ಚೆಯಿಂದ ಕಾಕತಿಯವರೆಗೆ ರಸ್ತೆ ನಿರ್ಮಿಸಲಿದೆ. ಬೆಂಗಳೂರು ಹಾಗೂ ಪುಣೆ (ಮುಂಬೈ) ನಡುವೆ ಸಂಚರಿಸುವ ವಾಹನಗಳು ಈಗಿನಂತೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4ರ ಮೂಲಕ ಸಂಚರಿಸಬಹುದಾಗಿದೆ.

ಭೂ ಸ್ವಾಧೀನ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.

ಬೆಳಗಾವಿ ನಗರದ ಹೊರ ವಲಯದಲ್ಲಿ ವರ್ತುಳ ರಸ್ತೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿ ಹಂತದಲ್ಲಿದೆ. ಕೆಲವು ಕಡೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆಗೆ ಎಷ್ಟು ಭೂಮಿ ಬೇಕೆಂಬ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರವು ಭೂಸ್ವಾಧೀನಕ್ಕೆ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಿದೆ.| ರವಿ ಕರಲಿಂಗಣ್ಣವರ ಉಪವಿಭಾಗಾಧಿಕಾರಿ, ಬೆಳಗಾವಿಬೆಳಗಾವಿ ನಗರದ ಹೊರ ವಲಯದಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಳ್ಳಬೇಕಾಗಿದ್ದ ಭೂಮಿಯ ಮೊತ್ತದಲ್ಲಿ ಶೇ. 50ರಷ್ಟು ಅನುದಾನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆಗೆ ಕೆಲವೆಡೆ ಸಮಸ್ಯೆ ಉಂಟಾಗಿದ್ದರಿಂದ ಯೋಜನೆ ವಿಳಂಬವಾಗಿದೆ. ಎಲ್ಲವನ್ನೂ ಸರಿಪಡಿಸಿ ಶೀಘ್ರದಲ್ಲೇ ಉದ್ದೇಶಿತ ಕಾಮಗಾರಿ ಆರಂಭವಾಗಲಿದೆ.| ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net