

ಹಾಸನ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ ರದ್ದುಗೊಳಿಸಿರುವ ಕ್ರಮ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸದಸ್ಯರು ಮಂಗಳವಾರ ನಗರದ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ, ಪ್ರಧಾನಿ ಮೋದಿ ಅವರ ನಡೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಮಲ್ಲಿಗೆವಾಳು ದೇವಪ್ಪ ಮಾತನಾಡಿ, ಅಧಿಕಾರದ ಅಹಂಕಾರದಲ್ಲಿರುವ ಬಿಜೆಪಿ ನಾಯಕರು ಸಾಮಾನ್ಯ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ. ಆಡಳಿತ ವೈಫಲ್ಯಗಳ ವಿರುದ್ಧ ಮಾತನಾಡುವ ವಿರೋಧ ಪಕ್ಷದ ನಾಯಕರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಪ್ರಕರಣ ದಾಖಲಿಸಲಾಗುತ್ತಿದೆ. ಅದೇ ರೀತಿ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯ ಸ್ಥಾನ ರದ್ದು ಮಾಡಿದ್ದಾರೆ ಎಂದು ಆರೋಪಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಗೊರೂರು ಮಾತನಾಡಿ, ಬಿಜೆಪಿ ದೇಶದಲ್ಲಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ. ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ಸರ್ಕಾರ ರಾಜಕೀಯ ಷಡ್ಯಂತ್ರ ರೂಪಿಸಿದೆ. ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಭಾರತ್ ಜೊಡೋ ಯಾತ್ರೆ ಯಶಸ್ವಿಯಿಂದ ಕಂಗೆಟ್ಟಿರುವ ಬಿಜೆಪಿ, ರಾಹುಲ್ ಗಾಂಧಿ ಅವರ ವಿರುದ್ಧ ರಾಜಕೀಯ ದುರುದ್ದೇಶ ಸಾಧಿಸಿ ಅವರ ಹಕ್ಕು ಕಿತ್ತುಕೊಳ್ಳುವ ಹುನ್ನಾರ ಮಾಡಿದೆ. ಕೂಡಲೇ ರಾಹುಲ್ ಗಾಂಧಿ ಅನರ್ಹ ಆದೇಶ ವಾಪಸ್ ಪಡೆದು, ಅವರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ನಾಯಕರಹಳ್ಳಿ ಅಶೋಕ್, ಮುಬಷಿರ್ ಅಹಮ್ಮದ್, ಆಲ್ವಿನ್, ಕೆಪಿಸಿಸಿ ಸದಸ್ಯ ಸಲೀಂ ಕೊಲ್ಲಹಳ್ಳಿ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಲೀದ್ ಮನ್ಸೂರ್, ಉಪಾಧ್ಯಕ್ಷ ಮಹಮದ್ ಫೈರೋಜ್ ಗಾಂಧಿ, ಮಹಮ್ಮದ್ ಆಚಂಗಿ, ಮನ್ಸೂರ್ ಮಹಮ್ಮದ್ ಸೇರಿದಂತೆ ಇತರೆ ಕಾರ್ಯಕರ್ತರು ಭಾಗವಹಿಸಿದ್ದರು.