

ಹಾಸನ: ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದರೆ ಎನ್‌ಡಿಎ ಮೈತ್ರಿಕೂಟ 400 ಸ್ಥಾನವಲ್ಲ 500 ಸ್ಥಾನವನ್ನು ಗೆಲ್ಲಲಿದೆ. ಅವರು ಬಂದರೆ ಏನು ಬದಲಾವಣೆ ಆಗುವುದಿಲ್ಲ ಎಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದರು.
ನಗರದ ಶ್ರೀ ಸೀತಾ ರಾಮಾಂಜನೇಯ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಅವರು ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ. ಅವರು ಬಂದು ಪ್ರಚಾರ ಮಾಡಿದರೆ ನಾವು 500 ಸ್ಥಾನ ಗೆಲ್ಲುತ್ತೇವೆ. ನಾವು ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರು ಮೋದಿ ಅವರನ್ನು ಮೂರನೆ ಬಾರಿಗೆ ಗೆಲ್ಲಿಸಬೇಕು ಎಂದು ಬಯಸಿದ್ದಾರೆ. ಹಾಗಾಗಿ ಅವರ ಸಹಕಾರದೊಂದಿಗೆ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇವೆ. ರಾಹುಲ್ ಗಾಂಧಿ ಅವರು ಬಂದ ಕೂಡಲೇ ಬದಲಾವಣೆ ಆಗುತ್ತದೆ ಎಂಬುದು ಸುಳ್ಳು. ಅವರ ವರ್ಚಸ್ಸು ದಿನೇದಿನೆ ಕಡಿಮೆ ಆಗುತ್ತಿದೆ. ಅವರ ನಡವಳಿಕೆ, ಯೋಜನೆ, ಯೋಚನೆ ದೇಶಕ್ಕೆ ಪೂರಕವಾಗಿಲ್ಲ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ರಾಜ್ಯಕ್ಕೆ ಯಾರು ಬೇಕು? ದೇಶಕ್ಕೆ ಯಾರು ಬೇಕು? ಎಂದು ಜನರು ಯೋಚನೆ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಈ ರಾಜ್ಯ ಸರ್ಕಾರದ ವಿರುದ್ದ ನಿಲ್ಲುವ ಕಾಲ ಬರುತ್ತದೆ ಎಂದು ಭವಿಷ್ಯ ನುಡಿದರು.
ಲೋಕಸಭಾ ಚುನಾವಣೆಯಲ್ಲಿ ಹಾಸನದ ವಿವಿಧ ಭಾಗಗಳಲ್ಲಿ ಅದ್ಭುತವಾಗಿ ಪ್ರಚಾರ ನಡೆಯುತ್ತಿದ್ದು, ಹೆಣ್ಣು ಮಕ್ಕಳೇ ಸ್ವಯಂ ಪ್ರೇರಣೆಯಿಂದ ಬಂದು ಪ್ರಚಾರ ಮಾಡುತ್ತಿದ್ದಾರೆ. ನೂರಕ್ಕೆ ನೂರರಷ್ಟೇ ದೇವರು ಫಲ ಕೊಡುವ ವಿಶ್ವಾಸ ಇದೆ. ಕುಮಾರಣ್ಣ ಚನ್ನರಾಯಪಟ್ಟಣದಲ್ಲಿ ರೋಡ್ ಶೋ ಹಾಗೂ ಬೃಹತ್ ಸಭೆ ನಡೆಸುತ್ತಾರೆ. ಕೇಂದ್ರ ಸಚಿವ ನಾರಾಯಣಸ್ವಾಮಿ ಹಾಗು ಮಾಜಿ ಸಚಿವ ಮಾಧುಸ್ವಾಮಿ ಅವರು ನನ್ನೊಟ್ಟಿಗೆ ಬಂದು ಪ್ರಚಾರ ಮಾಡಲಿದ್ದಾರೆ ಎಂದರು.
ನರೇಂದ್ರ ಮೋದಿಯವರು 20 ಅಥವಾ 21ಕ್ಕೆ ಚಿಕ್ಕಬಳ್ಳಾಪುರ ಹಾಗು ಇತರೆಡೆ ಪ್ರವಾಸ ಇದೆ. ಅವರ ಪ್ರವಾಸ ನೋಡಿಕೊಂಡು ಯಡಿಯೂರಪ್ಪ ಅವರು ನಮ್ಮ ಜಿಲ್ಲೆಯಲ್ಲಿ ಪ್ರಚಾರಕ್ಕೆ ಬರುತ್ತಾರೆ. ಮೋದಿ ಅವರ ಪ್ರವಾಸ ಕಾರ್ಯಕ್ರಮ ಇನ್ನು ಅಂತಿಮ ಆಗಿಲ್ಲ. ಚಿಕ್ಕಬಳ್ಳಾಪುರ, ಅರಸೀಕೆರೆ ತುಮಕೂರು ಸೇರಿ ನಾಲ್ಕು ಸ್ಥಳದಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚೆ ಆಗುತ್ತಿದೆ. ನಾವೂ ಕೂಡ ಅರಸೀಕೆರೆಗೆ ಬಂದರೆ ಚಿತ್ರದುರ್ಗ, ತುಮಕೂರು, ಹಾಸನ ಕವರ್ ಆಗುತ್ತದೆ ಎಂದು ಹೇಳಿದ್ದೇವೆ. ಅವರ ಪ್ರವಾಸ ಅಂತಿಮ ಆದಾಗ ಗೊತ್ತಾಗಲಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಶ್ರೀ ಸೀತಾ ರಾಮಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಪ್ರಚಾರಕ್ಕೆಂದು ಬಂದಿದ್ದ ಮಹಿಳೆಯರ ಬಳಿ ಕೆಲ ಸಮಯ ಚರ್ಚಿಸಿದರು.
ಇದೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಗಿರೀಶ್ ಚನ್ನವೀರಪ್ಪ, ಮಾಧ್ಯಮ ವಕ್ತಾರ ಹೊಂಗೆರೆ ರಘು, ಗಿರೀಶ್, ಪ್ರೇಮಮ್ಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.