

ಹುಬ್ಬಳ್ಳಿ: ರಾಹುಲ್ ಗಾಂಧಿ ಕಾಂಗ್ರೆಸ್ಸಿನ ಚುನಾವಣೆ ಏಜೆಂಟ್ರಾಗಿ ಕೆಲಸ ಮಾಡುತ್ತಿದ್ದಾರಾ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಚುನಾವಣೆ ಏಜೆಂಟರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಬೊಮ್ಮಾಯಿ ಹೀಗೆ ಪ್ರತಿಕ್ರಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಮಾಜಿ ಸಿಎಂ, ಅನುಭವಿ ರಾಜಕಾರಣಿ ಈ ರೀತಿ ಹೇಳಿಕೆ ನೀಡುವುದಾ? ರಾಜ್ಯಕ್ಕೆ ಮೋದಿ ಭೇಟಿಯಿಂದ ಹಾಗೂ ಅವರಿಗೆ ಸಿಗುತ್ತಿರುವ ಜನ ಬೆಂಬಲದಿಂದ ಸಿದ್ದರಾಮಯ್ಯ ಅವರು ಎಷ್ಟು ಹತಾಶರಾಗಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.
ಪ್ರಧಾನಿ ಮೋದಿ, ಗೃಹ ಸಚಿವ ಅಮಿತ ಷಾ ಮತ್ತೆ ರಾಜ್ಯಕ್ಕೆ ಬರುತ್ತಾರೆ. ಮಾರ್ಚ್ 1ರಿಂದ ರಾಜ್ಯದ ನಾಲ್ಕು ಕಡೆಗಳಿಂದ ವಿಜಯ ಸಂಕಲ್ಪ ರಥ ಯಾತ್ರೆ ಆಯೋಜಿಸಲಾಗಿದೆ. ಇದು ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಿ ದಾವಣಗೆರೆಯಲ್ಲಿ ಮಾ. 25ರಂದು ಬೃಹತ್ ಸಮಾವೇಶ ನಡೆಸಲಾಗುವುದು. ಈ ಸಮಾವೇಶದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವರು ಎಂದು ತಿಳಿಸಿದರು.