

ಎನ್.ವೆಂಕಟೇಶ್
ಚಿಕ್ಕಬಳ್ಳಾಪುರ:ತಾಲೂಕಿನ ನಂದಿಯ ಭೋಗನಂದೀಶ್ವರಸ್ವಾಮಿ ಆಲಯದ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಕೈಗೊಂಡಿದ್ದ ದನಗಳ ಸಂತೆಯಲ್ಲಿನ ಅತ್ಯುತ್ತಮ ರಾಸುಗಳಿಗೆ ಬಹುಮಾನ ವಿತರಣೆಯಲ್ಲಿನ ವಿಳಂಬವು ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿ ಪ್ರತಿ ವರ್ಷ ಬ್ರಹ್ಮರಥೋತ್ಸವ 3ನೇ ದಿನ ರಾಸುಗಳ ಮಾಲೀಕರಿಗೆ ಬಹುಮಾನ ವಿತರಣೆಯು ವಾಡಿಕೆಯಾಗಿ ಬಂದಿದೆ. ಆದರೆ, ಈ ಬಾರಿ ಪ್ರಪ್ರಥಮ ಬಾರಿಗೆ ಸಚಿವ ಡಾ ಕೆ.ಸುಧಾಕರ್ ನೇತೃತ್ವದ ಖಾಸಗಿ ಫೌಂಡೇಷನ್ ಸಹಯೋಗದೊಂದಿಗೆ ಅದ್ದೂರಿಯಾಗಿ ಶಿವೋತ್ಸವ ಮತ್ತು ಬ್ರಹ್ಮರಥೋತ್ಸವ ಆಚರಿಸಿದ ಬಳಿಕ ವಿಳಂಬ ನೀತಿ ಅನುಸರಿಸಿರುವುದು ಹಲವು ಅಸಮಾಧಾನಕರ ಮಾತುಗಳಿಗೆ ಕಾರಣವಾಗಿದೆ.
ಮಾ.1ರಂದು ಮಹಾಶಿವರಾತ್ರಿ ಜಾಗರಣೆ ಮತ್ತು ಧಾರ್ಮಿಕ ಆಚರಣೆಗಳ ಶಿವೋತ್ಸವ ನಡೆಯಿತು. ಖ್ಯಾತ ಕಲಾವಿದರ ಗಾಯನ, ಹಾಸ್ಯ, ನೃತ್ಯ ಮತ್ತು ನಾಟಕ ಪ್ರದರ್ಶನ, ಲೇಸರ್ ಶೋ, ಸಿಎಂ ನೇತೃತ್ವದಲ್ಲಿ ಅದ್ದೂರಿಯಾಗಿ ವೇದಿಕೆ ಕಾರ್ಯಕ್ರಮದ ಉದ್ಘಾಟನೆಯ ಜತೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಹಾಗೆಯೇ ಹಬ್ಬದ ಮಾರನೇ ದಿನ ಮಾ.2ರಂದು ಸಹಸ್ರಾರು ಭಕ್ತರ ನಡುವೆ ಬ್ರಹ್ಮರಥೋತ್ಸವ ಕೈಗೊಳ್ಳಲಾಯಿತು. ಇದರ ಅಂಗವಾಗಿ ಪ್ರತಿ ವರ್ಷದಂತೆ ವಿವಿಧ ಭಾಗಗಳಿಂದ ರಾಸುಗಳ ಸಂತೆಗೆ ರೈತರು ಜಾನುವಾರುಗಳನ್ನು ಕರೆದುಕೊಂಡು ಬಂದಿದ್ದರು. ಇದಕ್ಕೆ ಪಶು ವೈದ್ಯ ಮತ್ತು ಪಶು ಸೇವಾ ಇಲಾಖೆಯು ಅಗತ್ಯ ವ್ಯವಸ್ಥೆ ಒದಗಿಸಿತ್ತು. ಆದರೆ, ಬ್ರಹ್ಮರಥೋತ್ಸವ ಮುಗಿದು ಎರಡು ವಾರಗಳೇ ಕಳೆಯುತ್ತಿದ್ದರೂ ಅತ್ಯುತ್ತಮ ರಾಸುಗಳಿಗೆ ಬಹುಮಾನ ಮಾತ್ರ ವಿತರಿಸಿಲ್ಲ.
ಹೊಸ ಸಂಪ್ರದಾಯಕ್ಕೆ ವಿರೋಧ: ನಂದಿ ಜಾತ್ರೆಯ ದನಗಳ ಸಂತೆಯಲ್ಲಿ ಹೋರಿ, ಹಾಲು ಹಲ್ಲು ಜೋಡಿ, ಎರಡು ಹಲ್ಲು ಜೋಡಿ ನಾಲ್ಕು ಹಲ್ಲು ಜೋಡಿ, ಆರು ಹಲ್ಲು ಜೋಡಿ, ತುಂಬು ಹಲ್ಲು ಜೋಡಿ ಸೇರಿ ವಿವಿಧ ಭಾಗಗಳಲ್ಲಿನ ಅತ್ಯುತ್ತಮ ರಾಸುಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ, ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಗುತ್ತಿತ್ತು. ಇದು ರಾಸುಗಳ ಸಾಕಣೆ ಮತ್ತು ನಿರ್ವಹಣೆಗೆ ಪ್ರೋತ್ಸಾಹದಾಯಕ ಕ್ರಮ. ಅದರಲ್ಲೂ ದೇವರ ಜಾತ್ರೆಯ ಹೆಸರಿನಲ್ಲಿ ಸಿಗುವ ಪುರಸ್ಕಾರಕ್ಕೆ ಒಳ್ಳೆಯ ಸಂದೇಶ ಮತ್ತು ಖುಷಿ ವಿಚಾರವನ್ನಾಗಿ ಪರಿಗಣಿಸಲಾಗುತ್ತಿತ್ತು. ಆದರೆ, ಈ ಸಂಪ್ರದಾಯವನ್ನು ಉಲ್ಲಂಘಿಸಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.
ಕುಂಟು ನೆಪದ ಆರೋಪ: ಬಹುಮಾನ ವಿತರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಕುಂಟು ನೆಪ ಹೇಳುತ್ತಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಜಾತ್ರೆಯ ಬಳಿಕ ಕಂದಾಯ ದಾಖಲೆ, ಮನೆ ಬಾಗಿಲಿಗೆ, ಗ್ರಾಮ ವಾಸ್ತವ್ಯ ಸೇರಿ ನಾನಾ ಕಾರ್ಯಕ್ರಮಗಳ ಒತ್ತಡದ ಸಬೂಬುಗಳು ಕೇಳಿ ಬರುತ್ತಿವೆ. ಮೊದಲು ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ದನಗಳ ಸಂತೆಗೆ ಒಲವು ಹೊಂದಿರಲಿಲ್ಲ. ಆದರೆ, ಸಚಿವ ಡಾ ಕೆ.ಸುಧಾಕರ್ ಶಿವೋತ್ಸವ ಆಚರಣೆಗೆ ಸೂಚಿಸಿದಾಗ ತರಾತುರಿಯಲ್ಲಿ ರಾಸುಗಳನ್ನು ಕರೆಸಲಾಯಿತು ಎನ್ನಲಾಗುತ್ತಿದೆ.
ಬೇರೆ ಯಾರೋ ಪ್ರಚಾರಕ್ಕಾಗಿ ನಂದಿ ಬ್ರಹ್ಮರಥೋತ್ಸವವನ್ನು ಶಿವೋತ್ಸವದ ಹೆಸರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಂಡಿರುವುದು ಸರಿಯಲ್ಲ. ಹಾಗೆಯೇ ಮುಲಾಜಿಗೊಳಪಟ್ಟು ರಾಸುಗಳಿಗೆ ಬಹುಮಾನ ವಿತರಿಸಲು ವಿಳಂಬ ನೀತಿ ಅನುಸರಿಸುವಿಕೆ ಸೇರಿ ಮನಸ್ಸಿಗೆ ಬಂದಂತೆ ಅಧಿಕಾರಿಗಳು ವರ್ತಿಸುತ್ತಿರುವುದು ದುರದೃಷ್ಟಕರ. ಜಾತ್ರೆ ದಿನ ಬಿಟ್ಟು ಬೇರೆ ಯಾವಾಗಲೋ ಕೊಡುತ್ತಾರಂತೆ. ನಂದಿಪತಿ, ಸಹಕಾರ ಬ್ಯಾಂಕಿನ ನಿರ್ದೇಶಕ ******* ಮುಖ್ಯಮಂತ್ರಿಗಳ ಕಾರ್ಯಕ್ರಮದ ಒತ್ತಡ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ನಂದಿ ಜಾತ್ರೆ ಮತ್ತು ದನಗಳ ಸಂತೆಯ ರಾಸುಗಳಿಗೆ ಬಹುಮಾನ ನೀಡಲಾಗಿಲ್ಲ. ತ್ವರಿತವಾಗಿ ಅದ್ದೂರಿ ವೇದಿಕೆ ಕಾರ್ಯಕ್ರಮ ಕೈಗೊಂಡು ವಿತರಿಸಲಾಗುವುದು. ಗಣಪತಿಶಾಸ್ತ್ರಿ, ತಹಸೀಲ್ದಾರ್, ಚಿಕ್ಕಬಳ್ಳಾಪುರ