

ಚಾಮರಾಜನಗರ: ಜಿಲ್ಲೆಯಲ್ಲಿ ರಾಸುಗಳಿಗೆ ಸಂಬಂಧಿಸಿದ ಕಾರ್ಯಕ್ರಮವೊಂದು ಕಾಡಂಚಿನ ಗ್ರಾಮಗಳ ರೈತರನ್ನು ತಲುಪಲು ಹೆಣಗಾಡುತ್ತಿದೆ.
ಪಶು ಸಂಗೋಪನೆ ಇಲಾಖೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಡಿಜಿಟಲೀಕರಣದ ಭಾಗವಾಗಿ ಇನ್ಾ(ಪ್ರಾಣಿಗಳ ಆರೋಗ್ಯ ಮತ್ತು ಉತ್ಪಾದನೆ ಮಾಹಿತಿ ಜಾಲ) ಯೋಜನೆಯಡಿ ಹಸು, ದನ, ಎಮ್ಮೆಗಳ ಕಿವಿಗೆ ಹಳದಿ ಬಣ್ಣದ ಟ್ಯಾಗ್ ಅಳವಡಿಸುವ ಕಾರ್ಯಕ್ರಮ ನಡೆಸಿದೆ. ಈ ಟ್ಯಾಗ್‌ನಲ್ಲಿ 12 ಸಂಖ್ಯೆಗಳು ಮತ್ತು ಕ್ಯೂಆರ್ ಕೋಡ್ ಸಹ ಇರುತ್ತದೆ. ಇದನ್ನು ರಾಸುಗಳ ಆಧಾರ್ ಕಾರ್ಡ್ ಎಂದೂ ಕರೆಯಬಹುದು. ಇದು ಕಾಡಿನ ಒಳಗಿರುವ ಮತ್ತು ಅಂಚಿನಲ್ಲಿರುವ ಗ್ರಾಮಗಳ ರಾಸುಗಳನ್ನು ತಲುಪಿಲ್ಲ.
ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಹನೂರು, ಗುಂಡ್ಲುಪೇಟೆ ತಾಲೂಕುಗಳಲ್ಲಿ ಈವರೆಗೆ 2,45,588 ರಾಸುಗಳಿಗೆ ಕಿವಿಯೋಲೆ ಹಾಕಲಾಗಿದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಾಕಿರುವ ರಾಸುಗಳಿಗೆ ಕಿವಿಯೋಲೆ ಹಾಕಲಾಗಿದೆ. ಕಾಡಿನೊಳಗಿರುವ ಗ್ರಾಮಗಳು ಮತ್ತು ಅಂಚಿನಲ್ಲಿರುವ ನಾಟಿ ದನ, ಹಸು, ಎಮ್ಮೆಗಳಿಗೆ ಕಿವಿಯೋಲೆ ಹಾಕಲಾಗಿಲ್ಲ.
ಕಾರಣವೇನು?: ಸಮಾಜದ ಕಟ್ಟಕಡೆಯ ವ್ಯಕ್ತಿ, ಸಮುದಾಯ, ಹಳ್ಳಿಗೆ ಸೌಲಭ್ಯ ತಲುಪಿದರಷ್ಟೇ ಸಾಕಾರಗೊಳ್ಳುತ್ತದೆ. ಅಂತೆಯೇ ರಾಸುಗಳಿಗೆ ಕಿವಿಯೋಲೆ ಹಾಕುವ ಕಾರ್ಯಕ್ರಮವೂ ಕಟ್ಟಕಡೆಯ ಗ್ರಾಮಗಳನ್ನು ತಲುಪಬೇಕಿದೆ. ಆದರೆ ಅಡ್ಡಿಯುಂಟಾಗಲು ಕೆಲವು ಕಾರಣಗಳಿವೆ. ಗ್ರಾಮಗಳಲ್ಲಿ ರೈತರು ತಮ್ಮ ಹಸು, ದನ, ಎಮ್ಮೆಗಳಿಗೆ ಕಿವಿಯೋಲೆ ಹಾಕಿಸಲು ಹಿಂದೇಟು ಹಾಕುತ್ತಾರೆ. ಹಾಗಾಗಿ ನಾಟಿ ಹಸು, ದನ, ಎಮ್ಮೆಗಳಲ್ಲಿ ಕಿವಿಯೋಲೆ ಕಂಡುಬರುವುದಿಲ್ಲ. ಚಾಮರಾಜನಗರ ಮತ್ತು ಹನೂರು ತಾಲೂಕಿನ ಕೆಲವು ಹಳ್ಳಿಗಳಲ್ಲಿ ಕಿವಿಯೋಲೆ ಹಾಕಿಸದ ನಾಟಿ ರಾಸುಗಳು ಕಾಣಸಿಗುತ್ತವೆ. ಇನ್ನು ಕೆಲವು ಗ್ರಾಮಗಳಲ್ಲಿ ಪಶು ಸಂಗೋಪನಾ ಇಲಾಖೆಯೇ ಕಾರ್ಯಕ್ರಮವನ್ನು ರೈತರಿಗೆ ತಲುಪಿಸಿರುವುದಿಲ್ಲ. ಇದರ ಬಗ್ಗೆ ಗೊತ್ತಿಲ್ಲದ ರೈತರಿಗೆ ಅರಿವು ಮೂಡಿಸಿ ಕಿವಿಯೋಲೆ ಹಾಕಿಸಲು ಮನವೊಲಿಸಬೇಕಾದ ಸವಾಲು ಎದುರಾಗಿದೆ.
ಉಪಯೋಗವೇನು?:
ರಾಸುಗಳಿಗೆ ಕಿವಿಯೋಲೆ ಹಾಕಿಸುವುದರಿಂದ ಹಲವು ಉಪಯೋಗಗಳಿವೆ. ಈ ಟ್ಯಾಗ್ ಆಧಾರ್ ಕಾರ್ಡ್‌ನಂತೆ ಕೆಲಸ ಮಾಡುತ್ತದೆ. ಟ್ಯಾಗ್ ಮೇಲಿನ ನಂಬರ್ ಮತ್ತು ಕ್ಯೂ ಆರ್ ಕೋಡ್ ಅನ್ನು ಭಾರತ್ ಪಶುಧನ್ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಿದರೆ ರಾಸಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು. ರಾಸು ಕಳ್ಳತನವಾದಾಗ ಕಿವಿಯೋಲೆ ಹಾಗೇ ಇದ್ದರೆ ಮಾಲೀಕರು ಯಾರೆಂದು ತಕ್ಷಣ ಕಂಡುಹಿಡಿಯಬಹುದು. ಕಾಲುಬಾಯಿ, ಕಂದು ರೋಗಗಳಿಗೆ ಹಾಕಿಸಿರುವ ವ್ಯಾಕ್ಸಿನ್ ಮಾಹಿತಿ, ಕೃತಕ ಗರ್ಭಧಾರಣೆ, ರಾಸುಗಳ ವಯಸ್ಸು ಮತ್ತು ಇನ್ಸೂರೆನ್ಸ್ ಮಾಡಿಸಲು ಕಡ್ಡಾಯವಾಗಿ ಕಿವಿಯೋಲೆ ಇರಲೇಬೇಕು.
ಕಾಡಂಚಿನ ರೈತರಿಗೆ ಅನುಕೂಲ ಕಾಡಿನೊಳಗಿರುವ ಮತ್ತು ಕಾಡಂಚಿನ ಗ್ರಾಮಗಳಲ್ಲಿ ರೈತರು ಸಾಕಿರುವ ರಾಸುಗಳಿಗೆ ಕಿವಿಯೋಲೆ ಹಾಕಿಸುವುದು ತುಂಬಾ ಅನುಕೂಲವಾಗಲಿದೆ. ಈ ಗ್ರಾಮಗಳಲ್ಲಿ ರಾಸುಗಳು ಮೇವು ಅರಸಿ ಕಾಡುಗಳತ್ತ ಹೋಗುತ್ತವೆ. ಕಾಡಂಚಿನ ಜಮೀನುಗಳಲ್ಲಿ ಮೇಯುವುದೂ ಉಂಟು. ಹೀಗಿರುವಾಗ ಕಾಡುಪ್ರಾಣಿಗಳು ರಾಸುಗಳ ಮೇಲೆ ದಾಳಿ ನಡೆಸಿರುವ ಉದಾಹರಣೆಗಳು ಬಹಳಷ್ಟಿವೆ. ಇಂತಹ ಸಂದರ್ಭದಲ್ಲಿ ರಾಸುಗಳಿಗೆ ಹಾಕಿಸಿರುವ ಕಿವಿಯೋಲೆಯು ಅರಣ್ಯ ಇಲಾಖೆಗೆ ಖಚಿತ ಮಾಹಿತಿ ನೀಡಲು ನೆರವಾಗುತ್ತದೆ. ಸರ್ಕಾರದಿಂದ ಪರಿಹಾರ ಪಡೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಅನುವು ಮಾಡಿಕೊಡುತ್ತದೆ. ಇದಿಷ್ಟೇ ಅಲ್ಲದೆ, ಹಳ್ಳಿಗಾಡಿನಲ್ಲಿ ದೇಸಿ ತಳಿಯ ಸಂರಕ್ಷಣೆ ಉತ್ತಮವಾಗಿ ನಡೆಯುತ್ತದೆ. ಮಲೆ ಮಹದೇಶ್ವರ ಬೆಟ್ಟದ ಗುಡ್ಡಗಾಡು ಪ್ರದೇಶದಲ್ಲಿ ನಾಟಿ ದನಗಳು ಹೆಸರುವಾಸಿಯಾಗಿವೆ. ಇವುಗಳ ಆರೋಗ್ಯಕ್ಕಾಗಿ ಕಿವಿಯೋಲೆ ಹಾಕಿಸುವುದು ಉತ್ತಮ. ಈ ಕುರಿತು ಅರಿವು ಇಲ್ಲದ ರೈತರು ರಾಸುಗಳಿಗೆ ಕಿವಿಯೋಲೆ ಹಾಕಿಸುವುದಿಲ್ಲ. ಕೆಲವೊಬ್ಬರು ಕಿವಿಯೋಲೆ ಹಾಕಿಸಿದರೆ ಅವಲಕ್ಷಣ ಎಂಬ ಕಾರಣಕ್ಕೆ ಹಾಕಿಸುವುದಿಲ್ಲ. ಇಂತಹ ಹಳ್ಳಿಗಳಲ್ಲಿ ರೈತರು ಅಧಿಕ ಸಂಖ್ಯೆಯಲ್ಲಿ ದನ, ಹಸುಗಳನ್ನು ಸಾಕಿದ್ದಾರೆ. ಇವುಗಳಿಂದ ಸಿಗುವ ಸಗಣಿಯನ್ನು ಗೊಬ್ಬರವನ್ನಾಗಿ ಮಾರಾಟ ಮಾಡುವುದು, ಹಸುಗಳಿಗೆ ಹಾಲು ಕರೆದು ಮಾರಾಟ ಮಾಡಿ ಹೈನುಗಾರಿಕೆಯ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ರಾಸುಗಳಿಗೆ ಕಿವಿಯೋಲೆ ಹಾಕಲಾಗಿದೆ. ಕಾಡಿನೊಳಗಿರುವ ಮತ್ತು ಕಾಡಂಚಿನಲ್ಲಿರುವ ಗ್ರಾಮಗಳಲ್ಲಿ ಸಾಕಿರುವ ರಾಸುಗಳಿಗೆ ಕಿವಿಯೋಲೆ ಹಾಕಿಲ್ಲದಿದ್ದರೆ ತಪ್ಪದೇ ಹಾಕಿಸಲಾಗುವುದು. ಹನುಮೇಗೌಡ, ಉಪ ನಿರ್ದೇಶಕ, ಪಶು ಸಂಗೋಪನಾ ಇಲಾಖೆ, ಚಾಮರಾಜನಗರ