ರಾಸುಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸಿ

9-pnp 1
ಪಾಂಡವಪುರ ಪಟ್ಟಣದ ಮನ್‌ಮುಲ್ ಉಪಕಚೇರಿಯಲ್ಲಿ ಒಕ್ಕೂಟದ ವತಿಯಿಂದ ರಾಸುಗಳ ವಿಮೆ ಹಾಗೂ ಗುಂಪು ವಿಮಾ ಯೋಜನೆಯ ಫಲಾನುಭವಿಗಳಿಗೆ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಚೆಕ್ ವಿತರಿಸಿದರು.
Published on

ಪಾಂಡವಪುರ: ವಿಮೆ ಹಣ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಿಗೆ ಬರುತ್ತದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ರಾಸುಗಳನ್ನು ವಿಮಾ ಯೋಜನೆ ವ್ಯಾಪ್ತಿಗೆ ಒಳಪಡಬೇಕು ಮತ್ತು ಹಾಲು ಉತ್ಪಾದಕರು ಗುಂಪು ವಿಮೆ ಮಾಡಿಸಬೇಕು ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸಲಹೆ ನೀಡಿದರು.

ಪಟ್ಟಣದ ಮನ್‌ಮುಲ್ ಉಪಕಚೇರಿಯಲ್ಲಿ ರಾಸುಗಳ ವಿಮೆ, ಗುಂಪು ವಿಮಾ ಯೋಜನೆಯ ಚೆಕ್, ನೂತನ ಡೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಹಾಗೂ ಶಿಕ್ಷಣ ಪ್ರೋತ್ಸಾಹ ಧನದ ಚೆಕ್‌ಗಳನ್ನು ಫಲಾನುಭವಿಗಳಿಗೆ ಶುಕ್ರವಾರ ವಿತರಿಸಿ ಮಾತನಾಡಿದರು.
ಹಾಲು ಒಕ್ಕೂಟದ ಸವಲತ್ತುಗಳ ಸದ್ಬಳಕೆ ಮತ್ತು ವಿಮಾ ಯೋಜನೆಗಳಿಂದ ರೈತರಿಗೆ ಯಾವ ರೀತಿ ನ್ಯಾಯ ದೊರಕಿಸಿಕೊಡಬೇಕು ಎಂಬುದನ್ನು ಅರಿತು ನಾವು ಕೆಲಸ ಮಾಡಬೇಕಿದೆ. ಹಾಲು ಉತ್ಪಾದಕರಿಗೆ ತೊಂದರೆಯಾಗದಂತೆ ಮನ್‌ಮುಲ್ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಒಕ್ಕೂಟದ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.
ರಾಸುಗಳ ವಿಮೆಗೆ ಒಕ್ಕೂಟ ಶೇ.75 ರಷ್ಟನ್ನು ಪಾವತಿಸುತ್ತದೆ. ರೈತರು ಶೇ.25 ರಷ್ಟು ಪಾವತಿಸಿದರೆ ರಾಸುಗಳು ಮರಣ ಹೊಂದಿದ ಸಂದರ್ಭದಲ್ಲಿ ಗರಿಷ್ಠ 70 ಸಾವಿರ ರೂ.ವರೆಗೆ ವಿಮೆ ಹಣ ಪಡೆಯಬಹುದಾಗಿದೆ. ಅದೇ ರೀತಿ ಷೇರುದಾರರು ವರ್ಷಕ್ಕೆ 200 ಮತ್ತು ಕುಟುಂಬದ ಸದಸ್ಯರು 400 ರೂ. ಪಾವತಿಸಿದರೆ 50 ಸಾವಿರ ರೂ. ವಿಮೆ ಹಣ ಸಿಗಲಿದೆ. ಇದರ ಅರಿವಿಲ್ಲದೆ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ರೈತರು ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ ಎಂದರು.
ಗುಣಮಟ್ಟದ ಹಾಲಿಗೆ ಸರ್ಕಾರದ ಪ್ರೋತ್ಸಾಹ ಧನ 5 ರೂ. ಸೇರಿ ಲೀಟರ್ ಹಾಲಿಗೆ 36.25 ಪಾವತಿಸಲಾಗುತ್ತಿದೆ. ಉತ್ಪಾದಕರು ಹಾಲಿನ ಗುಣಮಟ್ಟ ಕಾಯ್ದುಕೊಂಡರೆ ಸರ್ಕಾರದ ಪ್ರೋತ್ಸಾಹಧನ ವಾಪಸಾಗುವುದಿಲ್ಲ. ಜಿಲ್ಲೆಯಲ್ಲಿ ಪ್ರತಿದಿನ 10 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಈ ಪೈಕಿ ಕೇವಲ 3 ಲಕ್ಷ ಹಾಲು ಮಾರಾಟವಾಗುತ್ತಿದೆ. ಆದರೂ, ರೈತರಿಗೆ ತೊಂದರೆಯಾಗದಂತೆ ಶೇಖರಣೆಯಾಗುವ ಎಲ್ಲ ಹಾಲಿಗೂ ಒಕ್ಕೂಟ ಬಡವಾಡೆ ಮಾಡುತ್ತಿದೆ. ಹಾಲಿನ ಗುಣಮಟ್ಟಕ್ಕೆ ರಾಸುಗಳ ನಿರ್ವಹಣೆ ಬಹಳ ಮುಖ್ಯ. ಒಕ್ಕೂಟ ಮಾರಾಟ ಮಾಡುವ ಪಶು ಆಹಾರ ಮತ್ತು ಮಿನರಲ್ಸ್ ಬಳಕೆ ಮಾಡುವಂತೆ ಮನವಿ ಮಾಡಿದರು.
ಮನ್‌ಮುಲ್ ಉಪವ್ಯವಸ್ಥಾಪಕ ನಿರ್ದೇಶಕ ಆರ್.ಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ 14.5 ಸಾವಿರ ರಾಸುಗಳಿವೆ. ಈ ಪೈಕಿ 8.5 ಸಾವಿರ ರಾಸುಗಳಿಗೆ ವಿಮೆ ಮಾಡಿಸಲಾಗಿದೆ. 2023ರಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ರಾಸುಗಳಿಗೆ ವಿಮೆ ಮಾಡಿಸಬೇಕು. ಪ್ರಚಾರದ ಕೊರತೆಯಿಂದ ರೈತರು ವಿಮೆ ಮಾಡಿಸಿಲ್ಲ. ಡೇರಿ ಕಾರ್ಯದರ್ಶಿಗಳು ರೈತರಿಗೆ ಸೂಕ್ತ ಮಾಹಿತಿ ನೀಡಿ ವಿಮೆ ಬಗ್ಗೆ ಪ್ರಚಾರ ಮಾಡಬೇಕು ಎಂದು ಕೋರಿದರು. ಮಾರ್ಗ ವಿಸ್ತರಣಾಧಿಕಾರಿಗಳಾದ ಎಚ್.ಎನ್.ಉಷಾ, ಎಚ್.ಎಸ್.ಮಂಜುನಾಥ್, ಪಶು ವೈದ್ಯರಾದ ಸಂಧ್ಯಾ, ವಿದ್ಯಾ, ಯಶವಂತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net