

ಚಿತ್ರದುರ್ಗ: ಪರಿಸರ ಸ್ನೇಹಿ ಗೌರಿ-ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಗೌರಿ-ಗಣೇಶ ಹಬ್ಬವನ್ನು ಆಚರಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಅಸೀಫ್‌ಖಾನ್ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆಯಿಂದ ಧವಳಗಿರಿ ಬಡಾವಣೆ ಅರವಿಂದ್ ಮಿಲ್ ಮತ್ತು ಮಾಳಪ್ಪನಹಟ್ಟಿ ಸರ್ಕಲ್ ಬಳಿ ಗುರುವಾರ ಏರ್ಪಡಿಸಿದ್ದ ಪರಿಸರಸ್ನೇಹಿ ಗೌರಿ-ಗಣೇಶ ಹಬ್ಬದ ಕುರಿತ ಜಾಗೃತಿ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಪಿಒಪಿ ಮೂರ್ತಿಗಳನ್ನು ಕೆರೆ, ಬಾವಿ ಹಾಗೂ ಇತರ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದರಿಂದ ಜಲಮೂಲಗಳು ಕಲುಷಿತಗೊಂಡು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ ಎಂದು ತಿಳಿಸಿದರು.
ಆದ್ದರಿಂದ ಪಿಒಪಿ ಹಾಗೂ ರಾಸಾಯನಿಕಯುಕ್ತ ಬಣ್ಣದ ಮೂರ್ತಿಗಳನ್ನು ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.
ನಗರಸಭೆ ಆಯುಕ್ತೆ ಎಂ.ರೇಣುಕಾ ಮಾತನಾಡಿ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆಗೆ ನಗರಸಭೆಯಿಂದ ತಾತ್ಕಾಲಿಕ ನೀರಿನ ತೊಟ್ಟಿಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ನಂತರ ಗೌರಿ, ಗಣೇಶ ಮೂರ್ತಿ ಮಾರಾಟ ಮಳಿಗೆಗಳನ್ನು ಪರಿಶೀಲಿಸಲಾಯಿತು. ಉಪ ಪರಿಸರ ಅಧಿಕಾರಿ ರಾಜೇಶ್, ನಗರಸಭೆ ಪರಿಸರ ಇಂಜಿನಿಯರ್ ಜಾಫರ್ ಇದ್ದರು. ಅರವಿಂದ್‌ಮಿಲ್ ಆವರಣದಲ್ಲಿ ಮಣ್ಣಿನ ಗಣಪತಿ ಮೂರ್ತಿ ತಯಾರಿಸುವ ಕುರಿತು ಮಲ್ಲಿಕಾರ್ಜುನ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.