ರಾಸಾಯನಿಕ ರಸಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಕ್ಷೀಣ

04.Pyp.01 (1)
ಕಗ್ಗುಂಡಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ಯಾಕ್ಟೀರಿಯಾಗಳ ಪುಷ್ಟೀಕರಣ ಮತ್ತು ಬಳಕೆ ಕುರಿತು ಮಾಹಿತಿ ನೀಡಲಾಯಿತು. ಡಾ.ದಾಮೋದರ, ಡಾ.ಬಸವರಾಜು, ಹರಾಜು ಅಧೀಕ್ಷಕ ಜೆ.ಬಿ.ಶಂಭುಲಿಂಗೇಗೌಡ ಇದ್ದರು.
Published on

ಪಿರಿಯಾಪಟ್ಟಣ: ರಾಸಾಯನಿಕ ರಸಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆ ಕ್ಷೀಣಿಸಲಿದೆ ಎಂದು ಕೃಷಿ ವಿಜ್ಞಾನಿ ಡಾ.ದಾಮೋದರ ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಸಸ್ಯ ಆರೋಗ್ಯ ನಿರ್ವಹಣೆ ವಿಭಾಗದ ವತಿಯಿಂದ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಂಬಾಕು ಬೆಳೆಗಾರರಿಗೆ ಜೈವಿಕ ಕೀಟನಾಶಕಗಳು ಮತ್ತು ಪೊಟ್ಯಾಷಿಯಂ ಬಿಡುಗಡೆ ಮಾಡುವ ಬ್ಯಾಕ್ಟೀರಿಯಾಗಳ ಪುಷ್ಟೀಕರಣ ಮತ್ತು ಬಳಕೆ ಕುರಿತು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಿನ ಇಳುವರಿ ಪಡೆಯಲು ಭೂಮಿಗೆ ಅಧಿಕ ರಾಸಾಯನಿಕ ಸಿಂಪಡಣೆ ಮಾಡುತ್ತಿದ್ದಾರೆ. ಇದರಿಂದ ಭೂಮಿಯ ಫಲವತ್ತತೆ ಕಡಿಮೆ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಆಹಾರಕ್ಷಾಮ ಎದುರಾಗುವ ಸಾಧ್ಯತೆ ಇದೆ. ರೈತರು ಭೂಮಿಯ ಆರೋಗ್ಯ ಕಾಪಾಡುವ ಜತೆಗೆ ಆರೋಗ್ಯಕರವಾದ ಇಳುವರಿಯನ್ನು ಪಡೆಯುವ ನಿಟ್ಟಿನಲ್ಲಿ ಜಾಗೃತಿ ವಹಿಸಬೇಕಾಗಿದೆ ಎಂದರು.

ಕೃಷಿ ವಿಜ್ಞಾನಿ ಡಾ.ಬಸವರಾಜು ಮಾತನಾಡಿ, ಸ್ಯುಡೊಮೋನಸ್ ಫ್ಲೋರೋಸೆನ್ಸ್ ಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಲಿದೆ. ಅಲ್ಲದೆ ಭೂಮಿಯ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಕೊಟ್ಟಿಗೆ ಗೊಬ್ಬರದಲ್ಲಿ ಬಳಕೆ ಮಾಡಬೇಕು ಎಂದರು.

ಕಗ್ಗುಂಡಿ ತಂಬಾಕು ಮಂಡಳಿಯ ಹರಾಜು ಅಧೀಕ್ಷಕ ಜೆ.ಬಿ.ಶಂಭುಲಿಂಗೇಗೌಡ ಮಾತನಾಡಿ, ಮಣ್ಣಿನ ಆರೋಗ್ಯ ಸುಧಾರಣೆಗಾಗಿ ವೈಜ್ಞಾನಿಕ ಪದ್ಧತಿ ಅನುಸರಿಸುವ ಮೂಲಕ ಹೆಚ್ಚಿನ ಇಳುವರಿ ಹಾಗೂ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ತಂಬಾಕು ಮಂಡಳಿಯ ಕ್ಷೇತ್ರ ಅಧಿಕಾರಿ ಸಾಗರ್, ಕ್ಷೇತ್ರ ಸಹಾಯಕರಾದ ಪ್ರಕಾಶ್, ರಂಜಿತ್, ಹರ್ಷಿತಾ ಶ್ರೀದರ್, ಜಯಶ್ರೀ, ರಾಹುಲ್, ನವೀನ್ ಸೇರಿದಂತೆ ಹಲವು ರೈತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net