ರಾಸಾಯನಿಕ ಮುಕ್ತ ತರಕಾರಿ ಕೃಷಿಗೆ ಪ್ರೋತ್ಸಾಹ

26HLY-2(A)
Published on

ಹಳಿಯಾಳ: ತಾಲೂಕಿನಲ್ಲಿ ರಾಸಾಯನಿಕ ಮುಕ್ತ ತರಕಾರಿ ಕೃಷಿಗೆ ಉತ್ತೇಜನ ನೀಡುವುದಕ್ಕಾಗಿ ಶಾಸಕ ಆರ್.ವಿ. ದೇಶಪಾಂಡೆ ಅವರು ಹಲವು ಯತ್ನ ನಡೆಸಿದ್ದಾರೆ.

ಲಾಕ್​ಡೌನ್ ಸಮಯದಲ್ಲಿ ಹೊರ ಜಿಲ್ಲೆಗಳಿಂದ ತರಕಾರಿ ಆಮದು ಸ್ಥಗಿತಗೊಂಡಿತ್ತು. ಆದ್ದರಿಂದ ತಾಲೂಕಿನ ಜನರಿಗೆ ಸಾಕಾಗುವಷ್ಟು ತರಕಾರಿಯನ್ನು ಬೆಳೆಸುವ ಯೋಜನೆಗೆ ಚಾಲನೆ ನೀಡಿದರು. ತೋಟಗಾರಿಕೆ ಇಲಾಖೆ ತಜ್ಞರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಶಾಸಕ ದೇಶಪಾಂಡೆ ಅವರು, ಅಲ್ಪಾವಧಿಯಲ್ಲಿ ಹೆಚ್ಚಿನ ಇಳುವರಿ ಹಾಗೂ ಲಾಭದಾಯಕ ತರಕಾರಿ ಬಿತ್ತನೆ ಬೀಜ ಆಮದು ಮಾಡಲು ಮುಂದಾದರು. ಇಂಡೋ ಅಮೆರಿಕನ್ ಹೈಬ್ರಿಡ್ ಸಿಡ್ಸ್ ಸಂಸ್ಥೆಯ ಮುಖ್ಯಸ್ಥ ಸಂತೋಷ ಅತ್ತಾವರ ಅವರೊಂದಿಗೆ ಚರ್ಚೆ ನಡೆಸಿ ಸುಮಾರು 12.52 ಲಕ್ಷ ಮೌಲ್ಯದ ತರಕಾರಿ ಬಿತ್ತನೆ ಬೀಜಗಳನ್ನುಉಚಿತವಾಗಿ ವಿತರಿಸಿದರು. ಹಳಿಯಾಳ ತಾಲೂಕಿನ ತೇರಗಾಂವ, ಮುರ್ಕವಾಡ, ಕಾವಲವಾಡ, ಮತ್ತು ಅಂಬಿಕಾನಗರ ಜಿಪಂ ಕ್ಷೇತ್ರದಲ್ಲಿ 2400 ರೈತರಿಗೆ ಬದನೆಕಾಯಿ, ಟೊಮ್ಯಾಟೊ, ಬೆಂಡೆ, ಹಸಿ ಮೆಣಸಿನಕಾಯಿ ಬಿತ್ತನೆ ಬೀಜಗಳನ್ನು ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಉಚಿತವಾಗಿ ವಿತರಿಸಿದ್ದಾರೆ.

ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತರಕಾರಿ ಬೆಳೆ ಬೆಳೆಯುವ ಕ್ಷೇತ್ರಗಳಿಗೆ ಭೇಟಿ ನೀಡಿ ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಜುಲೈ ಮೊದಲ ವಾರದಲ್ಲಿ ತಾಲೂಕಿನ ತರಕಾರಿ ಬೆಳೆಗಾರರ ಸಮಾವೇಶವನ್ನು ಮಾಡಲು ವಿಆರ್​ಡಿ ಟ್ರಸ್ಟ್ ಮುಂದಾಗಿದೆ. ಈ ಸಮಾವೇಶದಲ್ಲಿ ತರಕಾರಿ ಬೇಸಾಯ, ಸಾವಯವ ಪದ್ಧತಿ, ಮಾರಾಟ, ಉತ್ಪಾದನೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net