ರಾಸಾಯನಿಕ ಬಳಕೆಯಿಂದ ಜೇನು ಹುಳುಗಳ ಸಂಖ್ಯೆ ಕ್ಷೀಣ

mysore
Published on

ಮೈಸೂರು: ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಹೆಚ್ಚಾಗಿ ರಾಸಾಯನಿಕ ಬಳಸುವುದರಿಂದ ನೈಸರ್ಗಿಕವಾಗಿ ಜೇನು ಹುಳುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ, ಹಿರಿಯ ವಿಜ್ಞಾನಿ ಡಾ.ಬಿ.ಎನ್.ಜ್ಞಾನೇಶ್ ಹೇಳಿದರು.

ಭಾರತದ ತೋಟಗಾರಿಕಾ ಪಿತಾಮಹಾ ಡಾ.ಎಂ.ಎಚ್.ಮರಿಗೌಡರ ಜನ್ಮದಿನದ ಅಂಗವಾಗಿ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ತೋಟಗಾರಿಕಾ ದಿನಾಚರಣೆ, ಜೇನು ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಜೇನು ಕೃಷಿ ಮಾಡಬೇಕು. ಉತ್ತಮ ಇಳುವರಿಯನ್ನು ಪಡೆಯಬೇಕು ಎಂದರು.

ಡಾ.ಜಿ.ಎಂ.ವಿನಯ್ ಮಾತನಾಡಿ, ತೋಟಗಾರಿಕೆ ದಿನಾಚರಣೆಯ ಉದ್ದೇಶ, ತೋಟಗಾರಿಕೆ ಕ್ಷೇತ್ರಕ್ಕೆ ಡಾ.ಎಂ.ಎಚ್ ಮರಿಗೌಡರ ಕೊಡುಗೆ, ಅವರ ಸಾಧನೆಯನ್ನು ಪರಿಗಣಿಸಿ ಆ. 8ರಂದು ತೋಟಗಾರಿಕೆ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ನಿವೃತ್ತ ಕೆಎಎಸ್ ಅಧಿಕಾರಿ ಡಾ.ಬೊರೇಗೌಡ ಮಾತನಾಡಿ, ಮರಿಗೌಡರು ತೋಟಗಾರಿಕೆಯನ್ನೇ ತಮ್ಮ ಜೀವನವಾಗಿ ಮಾಡಿಕೊಂಡಿದ್ದರು. ಅವರು ಮಾಡಿರುವ ಕೆಲಸದಿಂದ ಇವತ್ತು ತೋಟಗಾರಿಕೆ ಬೆಳೆಗಳಿಂದ ರೈತರು ಹೆಚ್ಚಿನ ಆದಾಯ ಪಡೆಯುವಂತಾಗಿದೆ. ಕರ್ನಾಟಕ ರಾಜ್ಯವು ತೋಟಗಾರಿಕೆ ರಾಜ್ಯ ಎಂದು ಕರೆಯಲ್ಪಟ್ಟಿತ್ತು ಎಂದು ತಿಳಿಸಿದರು.

ಜೇನು ಕೃಷಿ ಮಾಡುವುದರಿಂದ ರೈತರು ತಮ್ಮ ಇಳವರಿಯನ್ನು ನೈಸರ್ಗಿಕವಾಗಿ ಹೆಚ್ಚು ಮಾಡಬಹುದು ಎಂದು ತಿಳಿಸಿದರು.

ಸಸ್ಯ ಸಂರಕ್ಷಣೆ ವಿಷಯ ತಜ್ಞ ಡಾ.ವೈ.ಪಿ.ಪ್ರಸಾದ್ ಮಾತನಾಡಿ, ಕೃಷಿಯಲ್ಲಿ ಜೇನು ಸಾಕಣೆಯು ಕೂಡ ಒಂದು ಭಾಗ. ಜೇನು ಸಾಕಣೆಯಿಂದ ಬೆಳೆಗಳಲ್ಲಿ ಪರಾಗಸ್ಪರ್ಶ ಹೆಚ್ಚಾಗಿ ಬೆಳೆಗಳ ಇಳವರಿ ಹೆಚ್ಚಾಗುತ್ತದೆ. ಇದನ್ನು ಒಂದು ಉದ್ಯಮವಾಗಿ ಅಥವಾ ಉಪ ಕಸುಬನ್ನಾಗಿ ಅಳವಡಿಸಿಕೊಂಡರೆ ಹೆಚ್ಚು ಲಾಭ ಪಡೆಯಬಹುದು ಎಂದು ತಿಳಿಸಿದರು.

ಪ್ರಗತಿಪರ ಜೇನು ಕೃಷಿಕ ರವಿ ಮಾತನಾಡಿ, ಜೇನಿನ ಇತಿಹಾಸ, ಜೇನು ಕೃಷಿ ಆರಂಭವಾದ ರೀತಿ, ಹೆಜ್ಜೇನು, ಕೊಲುಜೇನು, ನುಸುರಿ ಜೇನು, ತುಡುವೆ ಜೇನು ಹಾಗೂ ಇತರ ಜೇನಿನ ತಳಿಗಳ ಕುರಿತು ಮಾಹಿತಿ ನೀಡಿದರು.

ನ್ಯಾಷನಲ್ ಫರ್ಟಿಲೈಜರ್ ಲಿಮಿಟೆಡ್‌ನ ಜಿಲ್ಲಾ ವ್ಯವಸ್ಥಾಪಕ ಕಾಶಪ್ಪ, ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ಎಚ್.ವಿ.ದಿವ್ಯಾ, ಶಾಮರಾಜ್, ಡಾ.ದೀಪಕ ಸೇರಿದಂತೆ 70 ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net