

ಹಾಸನ: ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಸೋಮವಾರ ನೂತನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮವು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಅರ್ಥಪೂರ್ಣವಾಗಿ ನೆರವೇರಿತು.
ಜಗದ್ಗುರು ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಮಕ್ಕಳಿಗೆ ಓಂಕಾರವನ್ನು ಬೋಧಿಸಿ ಅಕ್ಷರಾಭ್ಯಾಸಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದಿವ್ಯ ಆಶೀರ್ವಚನ ನೀಡಿದ ಸ್ವಾಮೀಜಿಯವರು, ಶಿಕ್ಷಣವು ಕೇವಲ ಅಕ್ಷರ ಜ್ಞಾನಕ್ಕೆ ಸೀಮಿತವಾಗದೆ, ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಪಂಚೇಂದ್ರಿಯಗಳ ಸಮಗ್ರ ವಿಕಾಸಕ್ಕಾಗಿ ಪಂಚಮುಖಿ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಿದ ಅವರು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ಆ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರದ ಉನ್ನತಿಗಾಗಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕೇವಲ ಹಣ ಗಳಿಕೆಯ ಶಿಕ್ಷಣದಿಂದ ದೇಶದ ನಿಜವಾದ ಅಭಿವೃದ್ಧಿ ಸಾಧ್ಯವಿಲ್ಲ. ಜ್ಞಾನ ಮತ್ತು ಪ್ರಜ್ಞಾನಗಳೇ ನಮ್ಮ ರಾಷ್ಟ್ರದ ಅಡಿಪಾಯ. ಆಧುನಿಕ ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸದೃಢ ರಾಷ್ಟ್ರವನ್ನು ಕಟ್ಟಲು ಮುಂದಾಗಬೇಕು ಎಂದು ಸ್ವಾಮೀಜಿಯವರು ಕರೆ ನೀಡಿದರು.
ಭಾರತ ಅಳಿದರೆ ಉಳಿದವರಾರು? ಎಂಬ ಗಂಭೀರ ಚಿಂತನೆಯನ್ನು ಹಂಚಿಕೊಂಡ ಅವರು, ನಮ್ಮತನವನ್ನು ಉಳಿಸಿಕೊಳ್ಳುವ ಮಹತ್ವವನ್ನು ಸಾರಿದರು. ಪೋಷಕರು ಶಾಲೆಯೊಂದಿಗೆ ಕೈಜೋಡಿಸಿ ಮಕ್ಕಳಿಗೆ ಸಮಯ ನೀಡಬೇಕು ಮತ್ತು ಸಕಾರಾತ್ಮಕ ವಾತಾವರಣವನ್ನು ನಿರ್ಮಿಸಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರತಿನಿಧಿ ದಿನೇಶ್ ಹೆಗಡೆ ಅವರು, ಶಾಲೆಗೆ ಈ ವರ್ಷ 800ಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾಗಿರುವುದು ಹೆಮ್ಮೆಯ ವಿಷಯ. ರಾಜ್ಯಾದ್ಯಂತ ನಮ್ಮ ಸಂಸ್ಥೆಯ 26 ಶಾಲೆಗಳಲ್ಲಿ 25,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಸಂಸ್ಕಾರಯುತ ಶಿಕ್ಷಣವನ್ನು ನೀಡಲಾಗುತ್ತಿದೆ. ಕಳೆದ 60 ವರ್ಷಗಳಿಂದ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಷ್ಟ್ರೋತ್ಥಾನವು ಶಿಕ್ಷಣದ ಮೂಲಕ ಸದೃಢ ಸಮಾಜವನ್ನು ಕಟ್ಟಲು ಬದ್ಧವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೂರ್ವ ಪ್ರಾಥಮಿಕ ಶಾಲೆಗೆ ಸೇರ್ಪಡೆಗೊಂಡ ಹೊಸ ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಮಹತ್ವದ ಹೆಜ್ಜೆಯನ್ನು ಇರಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಹಾಸನ ಶಾಖಾಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಚೇತನ ನಾರಾಯಣ್, ಸಂಚಾರಕ ಪ್ರವೀಣ್, ಶಿಕ್ಷಕರು, ಪೋಷಕರು ಮತ್ತು ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.