ರಾಷ್ಟ್ರೋತ್ಥಾನ ಪರಿಷತ್‌ನಿಂದ ಹಾಸನದಲ್ಲಿ ಸಿಬಿಎಸ್‌ಇ ಸ್ಕೂಲ್: ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಮಾಹಿತಿ

DINESH HEGDE- press meet (10)
Published on

ಹಾಸನ: ರಾಷ್ಟ್ರೀತ್ಥಾನ ಪರಿಷತ್‌ಗೆ 60 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಕಾರ್ಯ ವಿಸ್ತಾರ ದೃಷ್ಟಿಯಿಂದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮ ಶಾಲೆಗಳನ್ನು ಪ್ರಾರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ತಿಳಿಸಿದರು.

ಶಿಕ್ಷಣದಲ್ಲಿ ಭಾರತೀಯತೆ ಇರಬೇಕು. ಆಧುನಿಕತೆ ಜತೆಗೆ ಭಾರತೀಯ ಜ್ಞಾನಪರಂಪರೆಯ ಶಿಕ್ಷಣವೂ ಬೇಕು. ಜೀವನ ಕೌಶಲದೊಂದಿಗೆ ರಾಷ್ಟ್ರಭಕ್ತಿಯೂ ಬೆಳೆಯಬೇಕು. ನೆಲದ ಮಣ್ಣಿನ ಸೊಗಡನ್ನು ಮೈಗೂಡಿಸಿಕೊಳ್ಳುವ ಶಿಕ್ಷಣವನ್ನು ಮಕ್ಕಳಿಗೆ ಕೊಡಮಾಡಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲೆಗಳ ಸಮೂಹ 2005-06 ಕಾರ್ಯಾರಂಭಿಸಿ, ಈಗ ಹಾಸನಕ್ಕೆ ಬಂದಿದೆ. 2025-26ರಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಷ್ಟ್ರೋತ್ಥಾನ ಪರಿಷತ್, ಸ್ವಸ್ಥ-ಸುಸ್ಥಿರ ಸಮಾಜ ನಿರ್ಮಾಣದ ಲಕ್ಷ್ಯವನ್ನಿಟ್ಟುಕೊಂಡು 1965 ರಿಂದ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆ. ಭಾರತದ ನೈಜ ಇತಿಹಾಸ, ಸಂಸ್ಕೃತಿ-ಪರಂಪರೆಗಳನ್ನು ಸಮಾಜದಲ್ಲಿ ಮತ್ತೆ ಜಾಗೃತಗೊಳಿಸಲು ರಾಷ್ಟ್ರೋತ್ಥಾನ ಸಾಹಿತ್ಯದೊಂದಿಗೆ ಪ್ರಾರಂಭವಾದ ಪರಿಷತ್‌ನ ಸಮಾಜ ಕಾರ್ಯ ಇಂದು ಸಾಹಿತ್ಯ, ಶಿಕ್ಷಣ, ಆರೋಗ್ಯ, ಸೇವೆ ಎಂಬ ನಾಲ್ಕು ಆಯಾಮಗಳೊಂದಿಗೆ ರಾಜ್ಯಾದ್ಯಂತ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದರು.

ಆಧುನಿಕ ಶಿಕ್ಷಣದ ನೆಪದಲ್ಲಿ ನಮ್ಮ ವಿದ್ಯಾರ್ಥಿಗಳು ಭಾರತೀಯತೆಯಿಂದ ದೂರವಾಗಬಾರದು. ಇದು ರಾಷ್ಟ್ರೋತ್ಥಾನ ಪರಿಷತ್‌ನ ಕಳಕಳಿ. ಈ ಹಿನ್ನೆಲೆಯಲ್ಲಿಯೇ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳನ್ನು ನಿರ್ಮಿಸುವ ಯೋಜನೆಯನ್ನು ಎತ್ತಿಕೊಂಡದ್ದು, ವಿದ್ಯಾರ್ಥಿಗಳಿಗೆ ಇಂದಿನ ಕಾಲಮಾನಕ್ಕೆ ತಕ್ಕಂತೆ ಆಧುನಿಕ ಕಲಿಕಾ ಪರಿಸರವನ್ನು ಸೃಷ್ಟಿಸಿ, ಅಲ್ಲಿ ಆಚಾರ, ವಿಚಾರ, ಸಂಸ್ಕೃತಿಯೊಂದಿಗೆ ಭಾರತೀಯ ಜ್ಞಾನ ಪರಂಪರೆಯ ಶಿಕ್ಷಣ ನೀಡುವ ಧ್ಯೇಯದೊಡನೆ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳನ್ನು ಪ್ರಾರಂಭಿಸಲಾಯಿತು. 14 ಸಿಬಿಎಸ್‌ಇ ಶಾಲೆಗಳು ಕರ್ನಾಟಕದ 9 ಜಿಲ್ಲೆಗಳಲ್ಲಿ ಇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ಸ್ಥಾನಿಯ ಸಮಿತಿ ಸದಸ್ಯ ಚೇತನ್ ನಾರಾಯಣ್, ನೂತನ ಸದಸ್ಯ ಪ್ರವೀಣ್, ವಸಂತ್, ಪ್ರಾಂಶುಪಾಲರಾದ ಉಮಾ ಪಾಟೀಲ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net