ರಾಷ್ಟ್ರೋತ್ಥಾನ ಪರಿಷತ್ ಹಾಸನ ಕಚೇರಿ ಉದ್ಘಾಟನೆ

ರಾಷ್ಟ್ರೋತ್ಥಾನ ಪರಿಷತ್ ಹಾಸನ ಕಚೇರಿ ಉದ್ಘಾಟನೆ
Published on

ಹಾಸನ: ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು ಇವರ ವತಿಯಿಂದ ನಗರದ ಕೃಷ್ಣಾನಗರದಲ್ಲಿ ನಿರ್ಮಿಸುತ್ತಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ನೂತನ ಕಚೇರಿಯನ್ನು ಶನಿವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು.
ಶನಿವಾರ ಬೆಳಿಗ್ಗೆಯಿಂದ ಪೂಜೆ ಕಾರ್ಯಕ್ರಮ ನಡೆದು ನಂತರ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಮಳೆ ಮಲ್ಲೇಶ್ವರ ಬೆಟ್ಟದ ಧರ್ಮದರ್ಶಿ ಹಾಗೂ ಮಠಾಧೀಶರಾದ ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ರಾಷ್ಟ್ರೋತ್ಥಾನ ಪರಿಷತ್ ಸ್ವಸ್ಥ-ಸುಸ್ಥಿರ ಸಮಾಜದ ನಿರ್ಮಾಣಕ್ಕೆ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.
ಭಾರತದ ನ್ಯೆಜ ಇತಿಹಾಸ, ಸಂಸ್ಕೃತಿ, ಸಾಮರಸ್ಯ, ಪರಂಪರೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಾಹಿತ್ಯ, ಶಿಕ್ಷಣ, ಅರೋಗ್ಯ, ಸೇವಾ ಕಾರ್ಯ ಒಳ ಗೊಂಡಂತೆ ಸಮಾಜದ ಅಭಿವೃದ್ಧಿಗೆ ಸಮಾಜ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಶ್ಲಾಘಿಸಿದರು.
ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1965 ರಿಂದಲೂ ಸಮಾಜದ ಅಭಿವೃದ್ಧಿಗೆ ಹಲವಾರು ಯೋಜನೆ ರೂಪಿಸಿ ರಾಷ್ಟ್ರೋತ್ಥಾನ ಪರಿಷತ್ ಜನಪರ ಕಲಸ ಕಾರ್ಯ ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿ ಮಾಡಲಾಗುತ್ತಿದೆ ಎಂದರು. ಗೋವುಗಳ ಸಂರಕ್ಷಣೆ, ಯೋಗ ಶಾಲೆ, ಆಸ್ಪತ್ರೆ, ರಕ್ತ ಕೇಂದ್ರ, ಸಂಸ್ಕೃತಿ ಸಂಸ್ಕಾರ ನೀಡುವಲ್ಲಿ ಸಮಾಜ ಮುಖಿಯಾಗಿ ಕೆಲಸ ಮಾಡಲಾಗುತ್ತಿದೆ.ಪ್ರಸಾರ ಭಾರತಿ ವತಿಯಿಂದ ಪುಸ್ತಕಗಳನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ರಾಜ್ಯದ್ಯಾಂತ ಶಾಲೆಗಳಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಶಾಲೆಗಳನ್ನು ನಡೆಸುತ್ತಿದ್ದು, ಹಾಸನದಲ್ಲಿ 15 ನೇ ಶಾಲೆಯನ್ನು 2025-26 ನೇ ಸಾಲಿಗೆ ಮಕ್ಕಳ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಪೂರ್ವ ಪ್ರಾಥಮಿಕದಿಂದ 6ನೇ ತರಗತಿ ವರೆಗೆ ತರಗತಿ ಆರಂಭಿಸಿ 10ನೇ ತರಗತಿ ವರೆಗೆ ಶಾಲೆ ನಡೆಸಲಾಗುವುದು ಎಂದು ತಿಳಿಸಿದರು. 2025ರ ಮಾರ್ಚ್‌ನಲ್ಲಿ ಶಾಲೆಯ ನೂತನ ಸುಸಜ್ಜಿತ ಕಟ್ಟಡ ಲೋಕಾರ್ಪಣೆ ಆಗಲಿದೆ. 2025-26 ರ ಸಾಲಿಗೆ ಮಕ್ಕಳ ನೋಂದಣಿ ಪ್ರಕ್ರಿಯೆ ಮುಂದಿನ ಅಕ್ಟೋಬರ್‌ನಿಂದ ಆರಂಭ ಆಗಲಿದೆ ಎಂದರು.
ಸಮಾಜ ಕಟ್ಟ್ಟುವ ಕಾರ್ಯದಲ್ಲಿ ಮಾದರಿ ಸಂಸ್ಥೆಯಾಗಿ ರೂಪಿಸುವ ನಿಟ್ಟಿನಲ್ಲಿ ವಿದ್ಯಾ ಕೇಂದ್ರ ಆರಂಭಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಧನಪಾಲ್ ಮಾತನಾಡಿ, ಇಂಥ ಸೇವಾ ಕಾರ್ಯಕ್ಕೆ ನಮ್ಮ ಸಹಕಾರ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವುದು ನಮ್ಮ ಕರ್ತವ್ಯ ಎಂದರು.
ರಾಷ್ಟ್ರೋತ್ಥಾನ ಪರಿಷತ್ ಹಾಸನ ವತಿಯಿಂದ ನಿರ್ಮಾಣ ಆಗುತ್ತಿರುವ ಶಾಲೆಯ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಆರ್‌ಎಸ್‌ಎಸ್‌ನ ಲಾ.ನಾ.ಶಾಸ್ತ್ರಿ, ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಸಮಾಜ ಸೇವಕ ವೇಣುಗೋಪಾಲ್, ಅಖಿಲ ಭಾರತ ವೀರಶೈವ ಮಹಾಸಭಾದ ಹಾಸನ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಮಧುಸೂದನ್, ಆಡಳಿತ ಅಧಿಕಾರಿಗಳು, ಹಾಸನ ರಾಷ್ಟ್ರೋತ್ಥಾನ ಪರಿಷತ್‌ನ ಯು.ಎಸ್. ಬಸವರಾಜು, ಮಹೇಶ್, ವಸಂತ್, ಪವನ್, ನಿವೇದಿತಾ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net