ರಾಷ್ಟ್ರೀಯತೆ ವಿಚಾರಧಾರೆ ಬಿಜೆಪಿ ಶಕ್ತಿ

suryakanth sabhe
Published on

ಬೀದರ್: ರಾಷ್ಟ್ರೀಯತೆಯ ವಿಚಾರಧಾರೆಯೊಂದಿಗೆ ಸದೃಢ ರಾಷ್ಟ್ರ ನಿರ್ಮಾಣದ ಸಂಕಲ್ಪದಿಂದ ನಡೆದಿರುವ ವಿವಿಧ ಕೆಲಸ ಕಾರ್ಯಗಳ ಫಲವಾಗಿ ಬಿಜೆಪಿ ಇಂದು ಬಲಿಷ್ಠವಾಗಿ ಬೆಳೆದು ದೇಶದ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ವ್ಯಾಖ್ಯಾನಿಸಿದರು.

ಇಲ್ಲಿ ಗುರುವಾರ ಜರುಗಿದ ಬಿಜೆಪಿ ಗ್ರಾಮೀಣ ಮಂಡಲ ಪ್ರಶಿಕ್ಷಣ ವರ್ಗದಲ್ಲಿ ಮಾತನಾಡಿ, ಅನೇಕರ ಸುದೀರ್ಘ ಅವಧಿಯ ಹೋರಾಟ, ತ್ಯಾಗ ಮತ್ತು ಬಲಿದಾನದಿಂದ ಪಕ್ಷ ಇಂದು ದೇಶವ್ಯಾಪಿ ಬಲಿಷ್ಠವಾಗಿ ಬೆಳೆದಿದೆ. ವಿಶ್ವದಲ್ಲೇ ಅತ್ಯಂತ ದೊಡ್ಡ ಪಕ್ಷ ಎಂಬ ಖ್ಯಾತಿ ಹೊಂದಿದೆ. ರಾಷ್ಟ್ರೀಯತೆಯ ತತ್ವ, ಸಿದ್ಧಾಂತಕ್ಕೆ ಬದ್ಧವಾಗಿ ರಾಜಕೀಯದಲ್ಲಿರುವ ಏಕೈಕ ಪಕ್ಷ ಇದಾಗಿದೆ ಎಂಬುದು ಹೆಮ್ಮೆಯ ಸಂಗತಿ ಎಂದರು.

ಭಾರತೀಯ ಶ್ರೇಷ್ಠ ಸಂಸ್ಕೃತಿ, ಪರಂಪರೆ, ಆಚರಣೆ, ಸಂಸ್ಕಾರ, ಮೌಲ್ಯಗಳನ್ನು ಉಳಿಸಿ ಬೆಳೆಸುವ ಕೆಲಸ ಬಿಜೆಪಿ ಮಾಡುತ್ತಿದೆ. ಪಕ್ಷದ ಕಾರ್ಯಕರ್ತರ ಅವಿರತ ಶ್ರಮದ ಪರಿಣಾಮವಾಗಿ ಇಂದು ಹತ್ತಾರು ರಾಜ್ಯಗಳು, ಕೇಂದ್ರದಲ್ಲಿ ಸ್ವಂತ ಬಲದಲ್ಲಿ ಅಧಿಕಾರ ನಡೆಸುತ್ತಿದೆ. ಹಿರಿಯರು ಸಂಘಟನೆಗಾಗಿ ಮಾಡಿದ ತ್ಯಾಗ ಇದಕ್ಕೆ ಮುಖ್ಯ ಕಾರಣ ಎಂದು ಹೇಳಿದರು.

ಪ್ರಶಿಕ್ಷಣ ಪ್ರಕೋಷ್ಠ ಜಿಲ್ಲಾ ಪ್ರಮುಖ ಶಿವರಾಜ ಗಂದಗೆ ಅವರು ಪಕ್ಷದ ಇತಿಹಾಸ ಮತ್ತು ಅಭಿವೃದ್ಧಿ ಕುರಿತು, ವಿಭಾಗ ಸಂಘಟನಾ ಕಾರ್ಯದರ್ಶಿ ದತ್ತಾತ್ರಿ ತೂಗಾಂವಕರ್ ಅವರು ನಮ್ಮ ವಿಚಾರ-ಪರಿವಾರ ಬಗ್ಗೆ, ಉಪೇಂದ್ರ ದೇಶಪಾಂಡೆಯವರು ಕಾರ್ಯಪದ್ಧತಿ ಮತ್ತು ಸಂಘಟನೆ ಸಂರಚನೆಯಲ್ಲಿ ನಮ್ಮ ಪಾತ್ರ ಬಗ್ಗೆ, ಗುರುನಾಥ ಜ್ಯಾಂತಿಕರ್ ಅವರು ನಮ್ಮ ವಿಚಾರಧಾರೆ-ಇಂದಿನ ಭಾರತದ ಮುಖ್ಯ ವಿಚಾರಧಾರೆ ಹಾಗೂ ರಾಜಶೇಖರ ನಾಗಮೂರ್ತಿ ಅವರು ವ್ಯಕ್ತಿತ್ವ ವಿಕಸನ ಬಗ್ಗೆ ವಿಷಯ ಮಂಡಿಸಿದರು.

ಸಂಸದ ಭಗವಂತ ಖೂಬಾ ಉದ್ಘಾಟಿಸಿದರು. ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ್, ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಶಿವರಾಜ ಕುದರೆ, ಅಶೋಕ ಪಾಟೀಲ್, ಅಶೋಕ ಹೊಕ್ರಾಣೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net