

ಅರಸೀಕೆರೆ: ತಾಲೂಕಿನ ಬಾಣಾವರ-ಕಣಕಟ್ಟೆ ಮಾರ್ಗವಾಗಿ ಹಾದು ಹೋಗಿರುವ ಹಾಗೂ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿ ಆಯಕಟ್ಟಿನ ಜಾಗಗಳಲ್ಲಿ ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಪರಿಣಾಮ ವಾಹನ ಚಾಲಕರು, ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ (2008-2011) 2009ರಲ್ಲಿ ರಾಜ್ಯ ಹೆದ್ದಾರಿ ಆಗಿದ್ದ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರದ ಮಂಜೂರಾತಿಯೊಂದಿಗೆ ಅಂದಿನ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಜತೆಗೂಡಿ ಅಂದಾಜು ಸುಮಾರು 250 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದರು. ಉದ್ದೇಶಿತ ಕಾಮಗಾರಿ ಬಾಣಾವರ ಕೆರೆ ಏರಿ, ಗರುಡನಗಿರಿ ಗುಡ್ಡ, ಕಣಕಟ್ಟೆ ಗ್ರಾಮದ ಹೊರ ವಲಯ ಸೇರಿ ವಿವಿಧೆಡೆ ಸ್ಥಗಿತಗೊಂಡಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ಆಳುದ್ದ ಗುಂಡಿಗಳು ಬಿದ್ದಿವೆ. ಪರಿಸ್ಥಿತಿ ಹೀಗಿದ್ದರೂ ಚುನಾಯಿತ ಜನಪ್ರತಿನಿಧಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಹೆದ್ದಾರಿಗೆ ಹೊಂದಿಕೊಂಡಂತಿರುವ ಗ್ರಾಮಗಳ ನಾಗರಿಕರು ಹಾಗೂ ವಾಹನ ಸವಾರರು ಹೆದ್ದಾರಿ ಅವ್ಯವಸ್ಥೆ ಕುರಿತು ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಪಘಾತಗಳು ಸಂಭವಿಸುತ್ತಿವೆ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಯಕಟ್ಟಿನ ಜಾಗಗಳಲ್ಲಿ ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವುದರಿಂದ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. ಪರಿಣಾಮ ಸಾವುಗಳು ಸಂಭವಿಸುತ್ತಿವೆ. ಕಾಮಗಾರಿ ಮುಗಿಸುವಂತೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಗಾಢ ನಿದ್ರೆಯಲ್ಲಿದೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ.
> ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ, ಕಲ್ಲುಸಾದರಹಳ್ಳಿ
ಹೊಣೆಗಾರಿಕೆ ಮರೆತಿದ್ದಾರೆ
ನಾಲ್ಕು ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆಗೆ ಮುಂದಾಗಬೇಕಿದ್ದ ಅಧಿಕಾರಿಗಳು ತಮ್ಮ ಹೊಣೆಗಾರಿಕೆ ಮರೆತಿದ್ದಾರೆ. ಇದರ ಪರಿಣಾಮವನ್ನು ಜನ ನಿತ್ಯ ಎದುರಿಸುವಂತಾಗಿದ್ದು, ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಿದೆ. ತಾಲೂಕು ಹಾಗೂ ಜಿಲ್ಲಾಡಳಿತ ತಕ್ಷಣ ಇತ್ತ ಗಮನಹರಿಸಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಬೇಕು.
> ನಂದೀಶ್ ಕಲ್ಲುಸಾದರಹಳ್ಳಿ, ಬಿಜೆಪಿ ಮುಖಂಡ, ಅರಸೀಕೆರೆ
ಸಂಸದರ ಗಮನಕ್ಕೆ
ಕಳೆದೊಂದು ದಶಕದಿಂದ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯ ಹಗ್ಗಜಗ್ಗಾಟದಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಪ್ರಯಾಣಿಕರು, ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಹೆದ್ದಾರಿ ಅವ್ಯವಸ್ಥೆಯನ್ನು ಈಗಾಗಲೇ ಸಂಸದ ಪ್ರಜ್ವಲ್ ರೇವಣ್ಣ ಗಮನಕ್ಕೆ ತರಲಾಗಿದೆ. ಕೇಂದ್ರ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಮನವಿ ಮಾಡಲಾಗಿದೆ.
> ಬಾಣಾವರ ಅಶೋಕ್, ಜಿಪಂ ಮಾಜಿ ಸದಸ್ಯ
ಅಹೋರಾತ್ರಿ ಧರಣಿ
ರಾಷ್ಟ್ರೀಯ ಹೆದ್ದಾರಿ ಕೆಲಸ ಅಪೂರ್ಣಗೊಂಡಿರುವ ಕಾರಣ ವಾಹನಗಳು ಸಂಚರಿಸುವಾಗ ಏಳುವ ಧೂಳು ಅಕ್ಕಪಕ್ಕದ ಕೃಷಿ ಜಮೀನುಗಳಿಗೆ ಆವರಿಸುತ್ತಿದೆ. ಬೆಳೆ ರಕ್ಷಿಸಿಕೊಳ್ಳುವುದು ಕಷ್ಟವಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಇತ್ತ ಗಮನಹರಿಸಿ ಲೋಪ ಸರಿಪಡಿಸದಿದ್ದರೆ ಅಹೋರಾತ್ರಿ ಧರಣಿ ನಡೆಸಲಾಗುವುದು.
> ಕನಕಂಚೇನಳ್ಳಿ ಪ್ರಸನ್ನಕುಮಾರ್, ರೈತ ಸಂಘದ ರಾಜ್ಯ ಸಂಚಾಲಕ, ಅರಸೀಕೆರೆ.
ಸಂಕಷ್ಟ ತಪ್ಪಿದ್ದಲ್ಲ
ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವುದರಲ್ಲಿ ರಾಜಕಾರಣಿಗಳು ನಿಸ್ಸೀಮರು ಎಂಬುದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಿತಿ ನೋಡಿದರೆ ತಿಳಿಯುತ್ತದೆ. ಇನ್ನು ಕ್ಷೇತ್ರಾದ್ಯಂತ ಹೊಸದಾಗಿ ನಡೆಯುತ್ತಿರುವ ಭೂಮಿ ಪೂಜೆ ಕೆಲಸಗಳಿಗೆ ಯಾವಾಗ ಮೋಕ್ಷ ದೊರೆಯುವುದೋ ಗೊತ್ತಿಲ್ಲ. ಕ್ಷೇತ್ರದ ಮತದಾರರು ಎಚ್ಚೆತ್ತುಕೊಳ್ಳದಿದ್ದರೆ ಸಂಕಷ್ಟ ತಪ್ಪಿದ್ದಲ್ಲ.
> ಕಣಕಟ್ಟೆ ಮಂಜು, ವಕೀಲ
ಗುತ್ತಿಗೆ ಸಂಸ್ಥೆಯ ನಿರ್ಲಕ್ಷ್ಯ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬದಿಂದಾಗಿ ಸಾಕಷ್ಟು ತೊಂದರೆ ಎದುರಾಗಿದೆ. ಗುತ್ತಿಗೆ ಪಡೆದಿರುವ ಸಂಸ್ಥೆಯ ನಿರ್ಲಕ್ಷ್ಯ ಎದ್ದುಕಾಣುತ್ತಿದ್ದು ಲೋಕೋಪಯೋಗಿ ಸಚಿವರು ತಕ್ಷಣವೇ ಮಧ್ಯೆ ಪ್ರವೇಶಿಸಿ ಸ್ಥಗಿತಗೊಂಡಿರುವ ಕೆಲಸ ಪುನರಾರಂಭಿಸಿ ಸಮಸ್ಯೆ ಪರಿಹರಿಸಬೇಕು.
> ಕೆ.ಎಂ. ಶಿವಲಿಂಗೇಗೌಡ, ಶಾಸಕ (ಸದನದಲ್ಲಿ ಮಾತನಾಡಿದ್ದು)
ಯೋಜನೆಗಳು ಹಳ್ಳ ಹಿಡಿಯಲಿವೆ
ಜಿ.ಎಸ್. ಗುರುಸಿದ್ದಪ್ಪ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ರಂಗನಕೆರೆ ಹಾಗೂ ಬಾಣಾವರ ಕೆರೆ ಏರಿಗಳನ್ನು ದುರಸ್ತಿಪಡಿಸುವ ಕೆಲಸ ಆರಂಭಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಬರೋಬ್ಬರಿ ಒಂದೂವರೆ ದಶಕ ಕಳೆದರೂ ಕಾಮಗಾರಿ ಪೂರ್ಣಗೊಳ್ಳದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷೃಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಜನ ಜಾಗೃತರಾಗದಿದ್ದರೆ ಎಲ್ಲ ಯೋಜನೆಗಳು ಹಳ್ಳಹಿಡಿಯಲಿವೆ.
> ಶಾನೆಗೆರೆ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ, ಅರಸೀಕೆರೆ
ಪೂರ್ಣಗೊಳ್ಳದಿರುವುದು ದುರದೃಷ್ಟಕರ
ಹತ್ತಾರು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದಿರುವುದು ದುರದೃಷ್ಟಕರ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ಅನುದಾನ ನೀಡಿದ್ದರೂ ಕಾಮಗಾರಿ ನಡೆಯದೆ ಇರುವುದಕ್ಕೆ ಸ್ಥಳೀಯ ಶಾಸಕರ ನಿರ್ಲಕ್ಷೃವೇ ಕಾರಣ. ತಕ್ಷಣವೇ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲರನ್ನು ಭೇಟಿ ಮಾಡಿ ಗಮನಸೆಳೆದು ಅವ್ಯವಸ್ಥೆ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು.
> ಎನ್.ಆರ್. ಸಂತೋಷ್, ಬಿಜೆಪಿ ಮುಖಂಡ, ಅರಸೀಕೆರೆ