

ಹಾಸನ: ಬೆಳ್ಳಂಬೆಳಿಗ್ಗೆ ಜವರಾಯ ಅಟ್ಟಹಾಸಕ್ಕೆ ದಂಪತಿ, ಪತಿ, ಪತ್ನಿ ಮಗು ಸೇರಿ ಆರು ಮಂದಿ ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಭಾನುವಾರ ನಗರದ ಹೊರವಲಯದ ಈಚನಹಳ್ಳಿ ಗ್ರಾಮದ ಬಳಿ ನಡೆದಿದೆ.
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದ ನಾರಾಯಣಪ್ಪ- ಸುನಂದ ದಂಪತಿ, ಹೊಸಕೋಟೆ ತಾಲೂಕಿ ಅಂದರಹಳ್ಳಿ ಗ್ರಾಮದ ರವಿಕುಮಾರ್, ಪತ್ನಿ ನೇತ್ರಾ ಹಾಗೂ ಪುತ್ರ ಚೇತನ್ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಕೊಂಡೇನಹಳ್ಳಿ ಗ್ರಾಮದ ಕಾರು ಚಾಲಕ ಗುಣಶೇಖರ್ ಮೃತ ದುರ್ದೈವಿಗಳು. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತ ದೇಹಗಳು ಕಾರಿನೊಳಗೇ ಛಿದ್ರವಾಗಿದ್ದವು. ಹೊರ ತೆರೆಯಲು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟರು.
ಹಾಸನ ಸಮೀಪದ ಕಂದಲಿಯ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಜವರಾಯ ಕಾದು ಕುಳಿತಿದ್ದ. ಬೆಳಗ್ಗೆ 7 ಗಂಟೆ ಸುಮಾರಿಗೆ ನಾಗ್ಪುರದಿಂದ ಬೆಂಗಳೂರು ಮಾರ್ಗವಾಗಿ ಕಂಟೇನರ್ ಲಾರಿ ಮಂಗಳೂರಿಗೆ ತೆರಳುತ್ತಿತ್ತು. ಅದೇ ವೇಳೆ ಆರು ಜನರಿದ್ದ ಈಟಿಯಸ್ ಕಾರು ಚಾಲಕ ವೇಗವಾಗಿ ಮಂಗಳೂರು ಕಡೆಯಿಂದ ಬರುತ್ತಿದ್ದ. ಈಚನಹಳ್ಳಿ ಗ್ರಾಮದ ಬಳಿ ಈಟಿಯಸ್ ಕಾರು, ಡಿವೈಡರ್‌ಗೆ ಡಿಕ್ಕಿ ಹೊಡೆದು ಅಲ್ಲಿಂದ ಹಾರಿ ಚಲಿಸುತ್ತಿದ್ದ ಟ್ರಾಕ್‌ಗೆ ಡಿಕ್ಕಿ ಹೊಡೆದಿದೆ.
ನಾರಾಯಣಪ್ಪ ಅವರು ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದರು. ಇವರನ್ನು ಶನಿವಾರ ಈಟಿಯಸ್ ಕಾರಿನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಎಲ್ಲರೂ ಊರಿಗೆ ವಾಪಸ್ಸಾಗುತ್ತಿದ್ದರು. ಇನ್ನು ಕೆಲವೇ ಗಂಟೆ ಕಳೆದಿದ್ದರೆ ಎಲ್ಲರೂ ತಮ್ಮ ತಮ್ಮ ಊರು ಸೇರಿಕೊಳ್ಳುತ್ತಿದ್ದರು.ಆದರೆ ವಿಧಿಯ ಆಟಕ್ಕೆ ಬಲಿಯಾಗಿ ಎಲ್ಲಾರು ಮಾಸಣ ಸೇರಿದ್ದಾರೆ.
ಡಿಕ್ಕಿ ರಭಸಕ್ಕೆ ಏನಾಯಿತು ಅನ್ನುವಷ್ಟರಲ್ಲಿ ಚಾಲಕ, ಪುಟ್ಟ ಬಾಲಕ ಸೇರಿ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ಕೂಡಲೇ ಸಂಚಾರ ಹಾಗೂ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಕೆಲವೇ ಹೊತ್ತಿನಲ್ಲಿ ಎಲ್ಲರ ಪ್ರಾಣ ಪಕ್ಷಿ ಹಾಕಿ ಹೋಗಿತ್ತು. ಈಟಿಯಸ್ ಕಾರು ಬಹುತೇಕ ಮುದ್ದೆಯಂತಾಗಿದ್ದು, ಮೃತದೇಹಗಳೂ ವಿರೂಪ ಆಗಿದ್ದವು. ಇವುಗಳನ್ನು ಹೊರ ತೆಗೆಯಲು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನಿಂದ ಎಲ್ಲಾ ಮೃತದೇಹಗಳನ್ನು ಹೊರ ತೆಗೆದು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಯಿತು.
ಭೀಕರ ಅಪಘಾತ ನಂತರ ರಾಷ್ಟ್ರೀಯ ಹೆದ್ದಾರಿ 75 ರ ಬೆಂಗಳೂರು-ಮಂಗಳೂರು ನಡುವಿನ ಸಂಚಾರದಲ್ಲಿ ಕೆಲಹೊತ್ತು ವ್ಯತ್ಯೆಯ ಉಂಟಾಗಿತ್ತು. ಕೂಡಲೇ ಜೆಸಿಬಿ ತರಿಸಿ ನಜ್ಜುಗುಜ್ಜಾಗಿದ್ದ ಕಾರನ್ನು ಟ್ಯಾಕ್ಟರ್‌ಗೆ ತುಂಬಿ ಸಂಚಾರ ಪೊಲೀಸ್ ಠಾಣೆ ಬಳಿಗೆ ಸಾಗಿಸಲಾಯಿತು. ಡಿಕ್ಕಿ ರಭಸಕ್ಕೆ ಕಂಟೇನರ್ನ ಸ್ಟೇರಿಂಗ್ ಸಹ ಜಾಮ್ ಆಗಿದ್ದು, ಕ್ರೇನ್ ಮೂಲಕ ರಸ್ತೆ ಬದಿಗೆ ಎಳೆದು ನಿಲ್ಲಿಸಿ ವಾಹನ ಓಡಾಟಕ್ಕೆ ಅನುವು ಮಾಡಿ ಕೊಡಲಾಯಿತು. ಜಿಲ್ಲಾಸ್ಪತ್ರೆ ಶವಾಗಾರದ ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಹಿಮ್ಸ್ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. 100 ರಿಂದ 120 ಕಿಲೋಮೀಟರ್ ವೇಗದಲ್ಲಿದ್ದ ಕಾರು ಚಾಲಕ ಕ್ಷಣಕಾಲ ನಿದ್ರೆ ಮಂಪರಿನಿಂತ ಕಣ್ಮುಚ್ಚಿದ್ದೇ ಈ ಭೀಕರ ಘಟನೆಗೆ ಕಾರಣ ಎನ್ನಲಾಗಿದೆ. ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಒಟ್ಟಿನಲ್ಲಿ ಆಸ್ಪತ್ರೆಗೆ ತೆರಳಿದ್ದವರು ಹೋದ ಕೆಲಸ ಮುಗಿಸಿ ಮಾರ್ಗಮಧ್ಯೆ ಬೀಚ್‌ಗೂ ಹೋಗಿ ಕೆಲಹೊತ್ತು ಆನಂದ ಪಟ್ಟು ಅದೇ ಗುಂಗಿನಲ್ಲಿ ಊರಿಗೆ ಮರಳುತ್ತಿದ್ದರು. ಆದರೆ ಮಾರ್ಗಮಧ್ಯೆಯೇ ನಡೆಯಬಾರದ ಘಟನೆ ನಡೆದು ಹೋಗಿದ್ದು ನಿಜಕ್ಕೂ ವಿಪರ್ಯಾಸ.
ಅಪಘಾತ ಕಂಡು ಸ್ಥಳೀಯರ ಆತಂಕ:
ಜವರಾಯನ ಹಟ್ಟಹಾಸಕ್ಕೆ ಆರು ಜನ ಸ್ಥಳದಲ್ಲೇ ಮೃತಪಟ್ಟಿರುವ ದೃಶ್ಯವನ್ನು ಕಂಡು ಸ್ಥಳೀಯರು ಮತ್ತು ಪ್ರಯಾಣಿಕರು ತೀವ್ರ ಆತಂಕ ವ್ಯಕ್ತಪಡಿದ್ದಾರೆ.ಇದರ ಜೊತೆಗೆ ಮಮ್ಮಲು ಮರುಗಿದ್ದಾರೆ. ವಿಚಾರ ತಿಳಿದ ತಕ್ಷಣ ರಾಷ್ಟ್ರೀಯ ಹೆದ್ದಾರಿಯ ಸುತ್ತಮುತ್ತಲಿನ ಗ್ರಾಮದ ನೂರಾರು ಜನ ನಿಂತು ದೃಶ್ಯವನ್ನು ನೋಡುತ್ತಾ ಕಂಬನಿ ಮಿಡಿದರು. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಅಪಘಾತವಾಗಿರುವುದರಿಂದ ಮಂಗಳೂರು ಮತ್ತು ಬೆಂಗಳೂರಿಗೆ ತೆರಳುವಂತಹ ಪ್ರಯಾಣಿಕರು ಕೆಲ ಸಮಯ ಟ್ರಾಫಿಕ್ ಜಾಮ್‌ನಿಂದ ತೊಂದರೆ ಅನುಭವಿಸಬೇಕಾಯಿತು.
ಚಾಲಕನ ಅತೀ ವೇಗ ತಂದ ಆಪತ್ತು:
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿದ್ದ, ಚಾಲಕ ಅತಿ ವೇಗವಾಗಿ ಕಾರು ಚಲಿಸಿದ ಪರಿಣಾಮ ಇಡಿ ಕುಟುಂಬವೇ ಚಿರ ನಿದ್ರೆಗೆ ಜಾರಿವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಹನ ಸವಾರರು ಮಾತನಾಡಿಕೊಳ್ಳುತ್ತಿದ್ದರು. ಈ ಅಪಘಾತವನ್ನು ಕಂಡು ಬೆಚ್ಚಿಬಿದ್ದಿರುವ ಸ್ಥಳೀಯರು ಮತ್ತು ವಾಹನ ಸಭಾರರು ಅತಿ ವೇಗದಿಂದಲೇ ಇಂತಹ ಅವಘಡ ಸಂಭವಿಸಿದ್ದು, ಕಾರಿನ ಚಾಲಕ ಡಿವೈಡರಿಗೆ ಡಿಕ್ಕಿ ಹೊಡೆದು ಎದುರುಗಡೆ ಬರುತ್ತಿದ್ದಂತಹ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಅಪಘಾತ ಕಂಡ ಸ್ಥಳೀಯರು ಮತ್ತು ಕೆಲ ವಾಹನ ಸವಾರರು ಮಾತನಾಡುತ್ತಿದ್ದರು.