ರಾಷ್ಟ್ರೀಯ ವಿಧಿವಿಜ್ಞಾನ ವಿವಿ ಕ್ಯಾಂಪಸ್‌ಗೆ ಕೇಂದ್ರ ಗೃಹಸಚಿವ ಅಮಿತ್ ಷಾ ಭೂಮಿಪೂಜೆ

3333
Published on

ಧಾರವಾಡ: ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಧಾರವಾಡ ಕ್ಯಾಂಪಸ್‌ ಸ್ಥಾಪನೆಗೆ ಕೇಂದ್ರ ಗೃಹಸಚಿವ ಅಮಿತ್ ಷಾ ಶನಿವಾರ ಭೂಮಿಪೂಜೆ ನೆರವೇರಿಸಿದರು. ನಗರದ ಕೃಷಿ ವಿಶ್ವವಿದ್ಯಾಲಯ ಅಧೀನದ ಜಮೀನಿನಲ್ಲಿ
ಕಟ್ಟಡ ನಿರ್ಮಾಣ ಉದ್ದೇಶಿತ ಸ್ಥಳದಲ್ಲಿ ಅಮಿತ್ ಷಾ ಭೂಮಿಪೂಜೆ ನೆರವೇರಿಸಿದರು.

ಅಪರಾಧ ಕೃತ್ಯಗಳನ್ನು ಸಾಬೀತುಪಡಿಸಲು ಪೊಲೀಸರ ಥರ್ಡ್ ಡಿಗ್ರಿ ಟಾರ್ಚರ್ ಕೊಡುವ ಕಾಲ ಈಗಿಲ್ಲ. ಆರೋಪಿಗೆ ಕಾನೂನಾತ್ಮಕವಾಗಿ ಶಿಕ್ಷೆಯಾಗುವಂತೆ ಮಾಡಲು ವಿಧಿವಿಜ್ಞಾನ ಆಧಾರಿತ ಸಾಕ್ಷ್ಯಸಂಗ್ರಹ ಅಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಧಿವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳ ಸ್ಥಾಪನೆಗೆ ಮುಂದಾಗಿದೆ. 12ನೇ ತರಗತಿ ನಂತರ ಅಥವಾ ಪದವಿ ನಂತರ ವಿಧಿವಿಜ್ಞಾನ ಕೋರ್ಸ್ ಕಲಿಯಬಹುದು. ಈ ಪದವೀಧರಿಗೆ ಉದ್ಯೋಗ ಖಾತ್ರಿ ಖಚಿತ. ಜಾಗತಿಕ ಮಟ್ಟದಲ್ಲಿ ಭಾರತ ಸರಿಸಮನಾಗಿ ನಿಲ್ಲಲು ವಿಧಿವಿಜ್ಞಾನ ಕ್ಷೇತ್ರವನ್ನು ಬಲಿಷ್ಠಗೊಳಿಸಿ ಅಗತ್ಯ ತಜ್ಞರನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ಧಾರವಾಡ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹಾಗೂ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗಲಿದೆ ಎಂದು ಅಮಿತ್ ಷಾ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗೃಹಸಚಿವ ಅರಗ ಜ್ಞಾನೇಂದ್ರ, ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net