ರಾಷ್ಟ್ರೀಯ ಲೋಕ ಅದಾಲತ್ ಸೆ.9ಕ್ಕೆ

2308-Kpl-Ravi-2
Published on

ಕೊಪ್ಪಳ: ಜಿಲ್ಲೆ ಸೇರಿ ರಾಜ್ಯಾದ್ಯಂತ ಸೆ.9ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಜಿಲ್ಲಾ ನ್ಯಾಯಾಧೀಶ ಬನ್ನಿಕಟ್ಟಿ ಹನುಮಂತಪ್ಪ ಹೇಳಿದರು.


ನಗರದ ಜಿಲ್ಲಾ ನ್ಯಾಯಾಲಯ ಕಚೇರಿಯಲ್ಲಿ ಬುಧವಾರ ಮಾಹಿತಿ ನೀಡಿ ಮಾತನಾಡಿದರು.


ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಮಾಡಿಕೊಳ್ಳಲು ಇದೊಂದು ಉತ್ತಮ ಅವಕಾಶ. ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ, ಉದ್ಯೋಗ ಮರು ಸ್ಥಾಪಿಸುವ ಪ್ರಕರಣ, ವಿದ್ಯತ್, ನೀರಿನ ಶುಲ್ಕ, ರಾಜೀ ಆಗಬಹುದಾದ ಅಪರಾಧ ಪ್ರಕರಣ, ವೈವಾಹಿಕ, ಸಿವಿಲ್, ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಸಂಬಂಧಿಸಿದ, ಗ್ರಾಹಕರ ವೇದಿಕೆಯಲ್ಲಿನ ಪ್ರಕರಣ, ಸಾಲ ವಸೂಲಾತಿ ಸೇರಿ ಇತರ ರಾಜಿ ಆಗಬಹುದಾದ ಪ್ರಕರಣಗಳನ್ನು ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.


ನ್ಯಾಯಾಲಯಗಳಲ್ಲಿ ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣವು ತೀರ್ಮಾನವಾಗುವುದರಿಂದ ಭಾಂದವ್ಯ ಉಳಿದು ವಿವಾದ ಮುಕ್ತಾಯವಾಗಲಿದೆ. ವ್ಯಾಜ್ಯಪೂರ್ವ ಪ್ರಕರಣಗಳನ್ನು ಪರಿಹರಿಸಿಕೊಳ್ಳಲು ಅವಕಾಶವಿದೆ. ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕ ಮರುಪಾವತಿ ಮಾಡಲಾಗುವುದು. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಲೋಕ್ ಅಧಾಲತ್ ಒಂದು ವಿಶೇಷ ಅವಕಾಶವೆಂದು ತಿಳಿಸಿದರು.


ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ ಟೋಲ್ ಫ್ರಿ ಸಂಖ್ಯೆ: 08539-220233ಗೆ ಸಂಪರ್ಕಿಸುವಂತೆ ಮಾಹಿತಿ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net