

ಚಿತ್ರದುರ್ಗ: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ 44,917ರ ಪೈಕಿ 3,939 ಪ್ರಕರಣವನ್ನು ಡಿ. 14ರ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಗುರಿ ಹೊಂದಲಾಗಿದೆ. ಅದರಲ್ಲಿ ಈಗಾಗಲೇ 38 ಕೇಸ್ ಬಗೆಹರಿದಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರೋಣ್ ವಾಸುದೇವ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಿ ಸಂಧಾನದ ಮೂಲಕ ತಮ್ಮ ಪ್ರಕರಣ ಸುಲಭ, ಶೀಘ್ರ, ಶುಲ್ಕರಹಿತವಾಗಿ ಇತ್ಯರ್ಥ ಪಡಿಸಿಕೊಳ್ಳಲು ಅದಾಲತ್ ಅತ್ಯುತ್ತಮ ಕಾರ್ಯಕ್ರಮ ಎಂದರು.
ಅದಾಲತ್ ಬಳಿಕವೂ ಹೊಸ ಪ್ರಕರಣ ದಾಖಲಾಗುವುದು ಸಾಮಾನ್ಯ. ರಾಜಿ ಆಗುವಂತ 321, ಚೆಕ್ ಅಮಾನ್ಯದ 4,775, ಬ್ಯಾಂಕ್ ವಸೂಲಾತಿ 1,558, ಖಾಸಗಿ ಸಾಲ ವಸೂಲಾತಿ 688, ಅಪಘಾತದ 2,561, ಆಸ್ತಿ ಪಾಲುಗಾರಿಕೆಯ 3,809, ಜನನ-ಮರಣ ನೋಂದಣಿ ಸಂಬಂಧದ 1,559 ಪ್ರಕರಣ ಜಿಲ್ಲೆಯ ವಿವಿಧ ನ್ಯಾಯಾಲಯಗಳಲಿವೆ ಎಂದು ಮಾಹಿತಿ ನೀಡಿದರು.
ನಾನ್ ಕಾಂಪೌಡಬಲ್, ಗಂಭೀರವಾದ ಅಪರಾಧಿಕ ಪ್ರಕರಣ ಹೊರತುಪಡಿಸಿ, ಉದ್ಯೋಗ, ಕಾರ್ಮಿಕ, ವೇತನ, ವಿದ್ಯುತ್, ನೀರು ಇತರೆ ಸೇವಾ ಶುಲ್ಕದ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅದಾಲತ್‌ನಲ್ಲಿ ಅವಕಾಶವಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಪತಿ-ಪತ್ನಿ ಸಂಬಂಧದ 181 ಪ್ರಕರಣ: ಹಿಂದು ವಿವಾಹ ಕಾಯ್ದೆಯಡಿ ಪತಿ-ಪತ್ನಿ ಜೊತೆಯಲ್ಲಿ ವಾಸಿಸಲು ದಾಖಲಿಸಿರುವ 181 ಪ್ರಕರಣಗಳನ್ನು ಈ ಬಾರಿಯ ಅದಾಲತ್‌ನಲ್ಲಿ ಆದ್ಯತೆ ಮೇಲೆ ಬಗೆಹರಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಚಿತ್ರದುರ್ಗ ನಗರದ 71 ಪ್ರಕರಣಗಳಿವೆ ಎಂದು ರೋಣ್ ವಾಸುದೇವ ತಿಳಿಸಿದರು.
ಸಾರ್ವಜನಿಕರು ಅದಾಲತ್ ಕುರಿತು ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ಸದಸ್ಯ ಕಾರ್ಯದರ್ಶಿ ಕಚೇರಿ ಮೊಬೈಲ್ 9141193935ಗೆ ಸಂಪರ್ಕಿಸಬಹುದು ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಇದ್ದರು.