

ಬಳ್ಳಾರಿ : ಜಿಲ್ಲೆಯಲ್ಲಿ ಜು.13 ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಹೇಳಿದರು.
ನಗರದ ಹೊಸ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾರ್ವಜನಿಕರು, ಪಕ್ಷಕಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜೀ ಸಂಧಾನ ಮಾಡಿಕೊಳ್ಳುವ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಾಗಿದೆ. ರಾಜಿ ಸಂಧಾನದಲ್ಲಿ ಪ್ರಕರಣ ಇತ್ಯರ್ಥವಾದರೆ ನ್ಯಾಯಾಲಯಕ್ಕೆ ತುಂಬಿದ ಶುಲ್ಕವನ್ನು ಸಂಪೂರ್ಣ ಮರುಪಾವತಿ ಮಾಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 62,039 ವಿವಿಧ ಚಾಲ್ತಿ ಪ್ರಕರಣಗಳಿದ್ದು, ಈಗಾಗಲೇ ರಾಜೀ ಆಗಬಹುದಾದ 8,058 ಪ್ರಕರಣಗಳನ್ನು ಗುರುತಿಸಿದ್ದು, ಇದರಲ್ಲಿ ಸಿವಿಲ್ ದಾವೆಗಳು ಅಂದರೆ ಜಮೀನು, ಮನೆ ಹಾಗೂ ನಿವೇಶನ, ಭೂಸ್ವಾಧೀನ ಪ್ರಕರಣಗಳು, ಬ್ಯಾಂಕ್ ವಸೂಲಾತಿ, ದರಖಾಸ್ತು ಅರ್ಜಿಗಳು, ಕಾರ್ಮಿಕ , ಮರಳು ಕಳ್ಳ ಸಾಗಾಣಿಕೆ, ಚೆಕ್‌ಬೌನ್ಸ್ , ಮೋಟರ ವಾಹನ ಅಪಘಾತ , ವೈವಾಹಿಕ ಹಾಗೂ ರಾಜೀ ಆಗಲು ಅರ್ಹವಿರುವ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಹಲವು ಗುರುತಿಸಲಾಗಿದೆ ಎಂದರು. ಸರ್ವೋಚ್ಚ ನ್ಯಾಯಾಲಯವು ವಿಶೇಷ ಲೋಕ ಅದಾಲತ್‌ಅನ್ನು ಜುಲೈ 29 ರಿಂದ ಆಗಸ್ಟ್ 03 ರ ವರೆಗೆ ನಡೆಸಲಿದ್ದು, ಪೂರ್ವಭಾವಿ ಲೋಕ ಅದಾಲತ್‌ಅನ್ನು ನಡೆಸಲು ವಿಡಿಯೋ ಕಾನ್ಸರೆನ್ಸ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಗೆ ಸಂಬಂಧಿಸಿದ ವಿವಿಧ ಪ್ರಕರಣಗಳು ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಇವೆ. ಇವುಗಳನ್ನು ಸಹ ಲೋಕ್ ಅದಾಲತ್ನಲ್ಲಿ ರಾಜಿಗೆ ಪರಿಗಣಿಸಲಾಗಿದೆ ಎಂದರು. ಸಾರ್ವಜನಿಕರು ತಮ್ಮ ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ಜುಲೈ 31 ರೊಳಗೆ ಪಾವತಿಸುವ ಮೂಲಕ ಶೇ 5 ರಷ್ಟು ವಿನಾಯತಿ ಪಡೆಯಬಹುದು ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ ಎನ್.ಹೊಸಮನೆ ಇದ್ದರು.