

ಬೀದರ್: ಜಿಲ್ಲೆಯಲ್ಲಿ 13ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ಪ್ರಯೋಜನವನ್ನು ಜನತೆ ಪಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರದ ಅಧ್ಯಕ್ಷರೂ ಆದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಬಸವರಾಜ ಚೇಗರೆಡ್ಡಿ ಕೋರಿದರು.
ಲೋಕ ಅದಾಲತ್ ನಲ್ಲಿ ಭೂಸ್ವಾನದ 200 ಪ್ರಕರಣ ಇತ್ಯರ್ಥ ಆಗಬೇಕಿದೆ. ಪ್ರೀ ಲಿಟಿಗೇಷನ್ ಪ್ರಕರಣಗಳ ಸಂಖ್ಯೆ 1000 ಆಗಬಹುದು. ಈಗಾಗಲೇ ನ್ಯಾಯಾಲಯದಲ್ಲಿ ವ್ಯಾಜ್ಯಪೂರ್ವ ಮತ್ತು ಬಾಕಿ ಪ್ರಕರಣಗಳಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅದಾಲತ್ ಮೂಲಕ ಕಡಿಮೆ ಖರ್ಚಿನಲ್ಲಿ ಶೀಘ್ರ ಮತ್ತು ಅಂತಿಮವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಯಾವುದೇ ರೀತಿಯ ಶುಲ್ಕ ಕೊಡಬೇಕಿಲ್ಲ. ಕಕ್ಷಿದಾರರು ನೇರ ಅಥವಾ ವಕೀಲರ ಮೂಲಕ ಭಾಗವಹಿಸಬಹುದು. ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ರಾಜಿಯಾದಲ್ಲಿ ಶೇ.100 ನ್ಯಾಯಾಲಯ ಶುಲ್ಕ ವಾಪಸ್ ನೀಡಲಾಗುವುದು. ಲೋಕ ಅದಾಲತ್ ಅವಾಡ್೯ ವಿರುದ್ಧ ಮೇಲ್ಮನವಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ವ್ಯಾಜ್ಯಪೂರ್ವ ಪ್ರಕರಣಗಳಾದ ಚೆಕ್ ಬೌನ್ಸ್, ಬ್ಯಾಂಕ್ ವಸೂಲಿ, ಕಾರ್ಮಿಕ ವಿವಾದ, ವಿದ್ಯುತ್, ನೀರಿನ ಶುಲ್ಕ ಇತರ. ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ರಾಜಿಯಾಗಬಹುದಾದ ಕ್ರಿಮಿನಲ್, ಚೆಕ್ ಬೌನ್ಸ್, ಬ್ಯಾಂಕ್ ವಸೂಲಿ, ಕಾರ್ಮಿಕ ವಿವಾದ, ವಾಹನ ಅಪಘಾತಗಳಲ್ಲಿ ಗಾಯಗೊಂಡ, ಮೃತರ ಕುಟುಂಬದವರಿಗೆ ಪರಿಹಾರ, ವಿದ್ಯುತ್, ನೀರಿನ ಶುಲ್ಕ (ರಾಜಿ ಆಗದಂಥ ಹೊರತುಪಡಿಸಿ) ವೈವಾಹಿಕ ವಿವಾದ, ಜೀವನಾಂಶ, ಭೂಸ್ವಾನ ಪರಿಹಾರ ಇತರ ಪ್ರಕರಣಗಳನ್ನು ಅದಾಲತ್ ನಲ್ಲಿ ಇತ್ಯರ್ಥ ಮಾಡಿಕೊಳ್ಳಬಹುದು ಎಂದರು.
ಕಳೆದ ಲೋಕ ಅದಾಲತ್ ನಲ್ಲಿ ಗುರುತಿಸಿದ್ದ 7,054 ಪ್ರಕರಣ ಪೈಕಿ 5,354 ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ 5,05,40,363 ರೂ. ಪರಿಹಾರ ನೀಡಲಾಗಿದೆ. ಈ ಬಾರಿ ಈಗಾಗಲೇ 8,795 ಪ್ರಕರಣ ಗುರುತಿಸಿದ್ದು, 2406ಕ್ಕೂ ಅಧಿಕ ವ್ಯಾಜ್ಯಪೂರ್ವ (ಬ್ಯಾಂಕ್ ವಸೂಲಾತಿ) ಪ್ರಕರಣಗಳಿವೆ ಎಂದು ತಿಳಿಸಿದರು.
ಲೋಕ ಅದಾಲತ್ ಕುರಿತ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿಗಳನ್ನು ಸಂಪರ್ಕಿಸಬಹುದು. ಬೀದರ್ ಕಚೇರಿ (08482-226116, 98442 70305), ಔರಾದ್ (97312 28169), ಬಸವಕಲ್ಯಾಣ (99022 13842), ಭಾಲ್ಕಿ (90080 70905) ಮತ್ತು ಹುಮನಾಬಾದ್ ಕಚೇರಿ (90353 42125)ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಕಾರ ಸದಸ್ಯ ಕಾರ್ಯದರ್ಶಿ ಸಿದ್ರಾಮಪ್ಪ ಕಲ್ಯಾಣರಾವ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಮಾನೂರೆ ಇದ್ದರು.