

ಮೈಸೂರು: ಪ್ರಸಕ್ತ ಸಾಲಿನ 9ನೇ ರಾಷ್ಟ್ರೀಯ ಲೋಕ ಅದಾಲತ್ ಸೆ.9ರಂದು ನಡೆಯಲಿದ್ದು, ಜಿಲ್ಲೆಯಲ್ಲಿರುವ 64 ನ್ಯಾಯಾಲಯಗಳಲ್ಲೂ ಬಾಕಿ ಪ್ರಕರಣಗಳ ಇತ್ಯರ್ಥ ಪ್ರಕ್ರಿಯೆ ಜರುಗಲಿದೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲೂ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಕೇಸ್‌ಗಳು, ವ್ಯಾಜ್ಯಪೂರ್ವ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸುವ ಉದ್ದೇಶದಿಂದ ಈ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಎಸ್.ಸಂಗ್ರೇಶಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1,14,990 ಪ್ರಕರಣಗಳು ಬಾಕಿ:
ಮೈಸೂರು ನಗರ ಮತ್ತು ತಾಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ 1,14,990 ಪ್ರಕರಣಗಳ ವಿಚಾರಣೆ ಬಾಕಿಯಿದ್ದು, ಅವುಗಳ ಪೈಕಿ 55,770 ಸಿವಿಲ್ ಪ್ರಕರಣಗಳು, 59,220 ಕ್ರಿಮಿನಲ್ ಪ್ರಕರಣಗಳಿವೆ. ಇದರಲ್ಲಿ 21,584 ರಾಜಿ ಆಗಬಹುದಾದ ಪ್ರಕರಣಗಳಿದ್ದು, ಈಗಾಗಲೇ 13,315 ಪ್ರಕರಣಗಳನ್ನು ರಾಜಿಯಾಗುವ ಸಾಧ್ಯತೆ ಇರುವ ಪ್ರಕರಣಗಳು ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜಿಯಾಗುವಂತಹ ಯಾವುದೇ ಪ್ರಕರಣಗಳನ್ನು ಕಕ್ಷಿದಾರರ ವಿನಂತಿಯ ಮೇಲೆ ಸಂಬಂಧಪಟ್ಟ ಕೋರ್ಟ್ ಆಗಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಸಂಬಂಧಪಟ್ಟ ತಾಲೂಕು ಕಾನೂನು ಸೇವೆ ಸಮಿತಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಅಂತಹ ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಅದಾಲತ್‌ನಲ್ಲಿ ರಾಜಿಯಾಗಬಲ್ಲ ಎಲ್ಲ ಪ್ರಕರಣಗಳು, ಹಣ ವಸೂಲಾತಿ ಪ್ರಕರಣ, ವಿದ್ಯುತ್ ಹಾಗೂ ನೇರ ಶುಲ್ಕ, ಭೂಸ್ವಾಧೀನ ಹಾಗೂ ಸಿವಿಲ್ ಪ್ರಕರಣಗಳು, ಮೋಟಾರು ವಾಹನ, ಅಪಘಾತ, ಕೌಟುಂಬಿಕ, ದೌರ್ಜನ್ಯ ತಡೆ ಕಾಯ್ದೆ, ಜೀವನಾಂಶ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗುವುದು. ಅದಾಲತ್‌ನಲ್ಲಿ ಇತರ ರಾಜಿಯಾಗುವಂತಹ ಪ್ರಕರಣಗಳನ್ನು ವಿನಂತಿಯ ಮೇರೆಗೆ ಸಂಬಂಧಪಟ್ಟ ನ್ಯಾಯಾಲಯಗಳು, ಜಿಲ್ಲಾ ಪ್ರಾಧಿಕಾರ ಅಥವಾ ತಾಲೂಕು ಸಮಿತಿಗಳನ್ನು ಸಂಪರ್ಕಿಸಿ ಕಕ್ಷಿದಾರರು ಅರ್ಜಿ ಸಲ್ಲಿಸಬೇಕು. ಅಂತಹ ಪ್ರಕರಣಗಳನ್ನು ರಾಜಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಇದೊಂದು ಸುವರ್ಣ ಅವಕಾಶ. ಪರಸ್ಪರ ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣವು ನಿರ್ಧಾರ ಮಾಡುವುದರಿಂದ ಬಾಂಧವ್ಯವು ಉಳಿದು ಸಾಮರಸ್ಯ ಬೆಳೆಯುತ್ತದೆ. ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಪ್ರಕರಣಗಳನ್ನೂ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರಕರಣ ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣವಾಗಿ ಮರು ಪಾವತಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ಮಾತನಾಡಿ, ಈ ವರ್ಷದಲ್ಲಿ ನಡೆಯುತ್ತಿರುವ 3ನೇ ಲೋಕ ಅದಾಲತ್ ಇದಾಗಿದೆ. ಕಳೆದ ಬಾರಿಯ ಲೋಕ ಅದಾಲತ್‌ನಲ್ಲಿ 4 ಸಾವಿರ ಪ್ರಕರಣಗಳ ಇತ್ಯರ್ಥದ ಗುರಿಯಿತ್ತು. ಇದನ್ನು ಮೀರಿ 5,582 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದರು.
ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ, ಉಪಾಧ್ಯಕ್ಷ ಪುಟ್ಟ ಸಿದ್ದೇಗೌಡ ಹಾಗೂ ಕಾರ್ಯದರ್ಶಿ ಎಸ್.ಉಮೇಶ್ ಇದ್ದರು.