

ಹಾಸನ: ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜ.25 ರಂದು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಮತಗಟ್ಟೆಗಳಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತಾರಾಜ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಶನಿವಾರ ರಾಷ್ಟ್ರೀಯ ಮತದಾರರ ದಿನಾಚರಣೆಯ ಕುರಿತು ನಡೆದ ಪೂರ್ವ ಸಿದ್ದತೆ ಸಭೆ ನಡೆಸಿ ಮಾತನಾಡಿದ ಅವರು ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಜ. 25 ರಂದು ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ, ಮತದಾನ ಕೇಂದ್ರಗಳಲ್ಲಿ ವಿವಿಧ ಸ್ವೀಪ್ ಚಟುವಟಿಕೆಗಳನ್ನು ಕೈಗೊಳ್ಳಲು ಸೂಚಿಸಿದರಲ್ಲದೆ ಯುವ ಮತದಾರರ ನೋಂದಣಿಗೆ ಹೆಚ್ಚು ಒತ್ತು ನೀಡುವಂತೆ ಸೂಚಿಸಿದರು.
ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಹಂತದಲ್ಲಿ ಸಭೆಯನ್ನು ಕರೆದು ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಹಾಗೂ ತಮ್ಮ ತಾಲೂಕು ವ್ಯಾಪ್ತಿಯ ದ್ವಿತೀಯ ಪಿಯುಸಿ, ಪದವಿ ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆದು ರಾಷ್ಟ್ರೀಯ ಮತದಾನದ ಬಗ್ಗೆ ಸಮಾರಂಭವನ್ನು ಏರ್ಪಡಿಸಲು ಚರ್ಚಿಸಿ, ತೀರ್ಮಾನ ಕೈಗೊಂಡ ಬಗ್ಗೆ ಸಭೆಯ ನಡವಳಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸುವಂತೆ ತಿಳಿಸಿದರು.
ಶಾಲಾ-ಕಾಲೇಜುಗಳಲ್ಲಿ 18 ವರ್ಷ ಪೂರ್ಣಗೊಂಡಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಆಯಾ ಕಾಲೇಜುಗಳಲ್ಲಿ ಸಮಾರಂಭಗಳನ್ನು ನಡೆಸಿ ನಥಿಂಗ್ ಲೈಕ್ ವೋಟರ್,ಐ ವೋಟ್ ಫಾರ್ ಶ್ಯೋರ್ ಎಂಬ ಘೋಷಣೆಯ ಬಗ್ಗೆ ಪ್ರಚುರ ಪಡಿಸುವಂತೆ ಹಾಗೂ ಶಾಲಾ-ಕಾಲೇಜುಗಳಲ್ಲಿ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಹೇಳಿದರು.
ಶಾಲಾ-ಕಾಲೇಜುಗಳಲ್ಲಿ ಮತದಾನದ ಅರಿವನ್ನು ಮೂಡಿಸಲು ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಡ್ರಾಯಿಂಗ್ ಸ್ಪರ್ಧೆಗಳನ್ನು ಆಯೋಜಿಸಲು ಹಾಗೂ ಮತದಾರರ ಪ್ರತಿಜ್ಞೆ ಸಮಾರಂಭವನ್ನು ನಡೆಸುವುದರ ಮೂಲಕ ಮತದಾನ ಜಾಗೃತಿ ಬಗ್ಗೆ ಪ್ರಮಾಣ ವಚನ ಸ್ವೀಕರಿಸಿ ಅದರ ಛಾಯಾ ಚಿತ್ರಗಳು, ವೀಡಿಯೋಗಳನ್ನು ಜಿಲ್ಲಾ ಪಂಚಾಯಿತಿಗೆ ಕಳುಹಿಸಿಕೊಡುವಂತೆ ಸೂಚಿಸಿದರು.
ರಾಷ್ಟ್ರೀಯ ಮತದಾನ ದಿನದ ಸಮಾರಂಭವನ್ನು ಸ್ಥಳೀಯ ಮಾಧ್ಯಮಗಳ ಮೂಲಕ ಪ್ರಚಾರಪಡಿಸಲು ಸೂಚಿಸಿದರಲ್ಲದೆ, ನನ್ನ ಮತ ನನ್ನ ಶಕ್ತಿ ನನ್ನ ಮತ ದೇಶದ ಅಭಿವೃದ್ದಿಗಾಗಿ ಎಂಬ ಘೋಷಣೆ ವಾಕ್ಯಗಳನ್ನು ಹಾಗೂ ಕಲಾ ತಂಡಗಳ ಮೂಲಕ ಮೂಡಿಸಲು ತಿಳಿಸಿದರು.
ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಗವಿಕಲರು, ಅಂದರು ಮತದಾನ ಮಾಡುವ ಬಗ್ಗೆ ಅರಿವು ಮೂಡಿಸಲು ಸೈನ್ ಲಾಂಗ್ ವೇಜ್ ಅನುಭವವುಳ್ಳ ಉಪನ್ಯಾಸಕರುಗಳನ್ನು ನಿಯೋಜಿಸಿ, ಮತದಾನದ ಅರಿವು ಮೂಡಿಸಿ ಎಂದರು.
ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸ್ವ ಸಹಾಯ ಗುಂಪಿನ ಮಹಿಳೆಯರಲ್ಲಿ ಶೇ.100 ರಷ್ಟು ಮತದಾನ ಚಲಾಯಿಸುವ ಬಗ್ಗೆ ಅರಿವು ಮೂಡಿಸಲು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸ್ವ ಸಹಾಯ ಗುಂಪಿನ ಮಹಿಳೆಯರ ಸಭೆಗಳನ್ನು ನಡೆಸಿ ಛಾಯಾಚಿತ್ರ ಮತ್ತು ವೀಡಿಯೋಗಳನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲು ತಿಳಿಸಿದರು.
ಮತದಾನದ ಬಗ್ಗೆ ಅರಿವು ಮೂಡಿಸಲು ಪೋಸ್ಟರ್, ಜಾಹಿರಾತುಗಳು, ಕರಪತ್ರಗಳು ಮತ್ತು ಬ್ಯಾನರ್ ಗಳನ್ನು ಕಡ್ಡಾಯವಾಗಿ ತಹಶೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿಗಳ ಕಚೇರಿ, ಪುರಸಭಾ ಕಚೇರಿ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಅಳವಡಿಸಲು ಸೂಚಿಸಿದರು.
ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಜನವರಿ 25 ರಂದು ಮಧ್ಯಾಹ್ನ 1 ಗಂಟೆ ನಂತರ ಆಯೋಜಿಸುವುದು. ಹಾಗೂ ಸದರಿ ದಿನದಂದು ಭಾರತ ಚುನಾವಣಾ ಆಯೋಗದಿಂದ ಮೇನ್ ಭಾರತ್ ಹೂನ್‌ಯನ್ನು ಹಾಡನ್ನು ಏಕಕಾಲದಲ್ಲಿ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕು ಮಟ್ಟದಲ್ಲಿ ಬ್ಯಾಂಕ್ ಗಳು, ಪೋಸ್ಟ್ ಆಫೀಸ್ ಗಳು, ರೈಲ್ವೆ ನಿಲ್ದಾಣಗಳು, ಗ್ರಾಮ ಪಂಚಾಯಿತಿಗಳು ಹಾಗೂ ಇತರೆ ಸರ್ಕಾರಿ ಅಧೀನ ಕಚೇರಿಗಳ ಸಹಭಾಗಿತ್ವದೊಂದಿಗೆ ರಾಷ್ಟ್ರೀಯ ಮತದಾರರ ದಿನವನ್ನು ಆಯೋಜಿಸುವಂತೆ ಹೇಳಿದರು.
ಚುನಾವಣಾ ಸಂದರ್ಭದಲ್ಲಿ ಮತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಿ ಕಡ್ಡಾಯವಾಗಿ ಮತದಾನ ಮಾಡಲು ವಿಶೇಷಚೇತನರು, ಹಿರಿಯ ನಾಗರೀಕರು, ತೃತೀಯ ಲಿಂಗಿಗಳು ಹಾಗೂ ಬುಡಕಟ್ಟು ಜನಾಂಗದವರಿಗೆ ಪ್ರೇರೇಪಿಸಲು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯದೀಶರು ಹಾಗೂ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವಿಕಾಂತ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾದಿನಾಧಿಕಾರಿ ಪರಪ್ಪಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಹಾದೇವಯ್ಯ, ನಗರ ಸಭೆಯ ಪೌರಾಯುಕ್ತ ಪರಮೆಶ್ವರಪ್ಪ ಹಾಗೂ ಇತರರು ಇದ್ದರು.