ರಾಷ್ಟ್ರೀಯ ಮತದಾರರ ದಿನಾಚರಣೆ ಸಿದ್ಧತೆಗೆ ಸೂಚನೆ

Published on

ಚಾಮರಾಜನಗರ: ರಾಷ್ಟ್ರೀಯ ಮತದಾರರ ದಿನವನ್ನು ಜ.25ರಂದು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವರ್ಚುವಲ್ ಮೂಲಕ ಅಧಿಕಾರಿಗಳೊಂದಿಗೆ ಶುಕ್ರವಾರ ಪೂರ್ವಭಾವಿ ಸಭೆ ನಡೆಸಿದ ಡಿಸಿ ಶಿಲ್ಪಾನಾಗ್, ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ವಿಶೇಷ ಘೋಷವಾಕ್ಯದೊಂದಿಗೆ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಜ.25ರಂದು ಆಯೋಜಿಸಬೇಕು. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಭಾರತ ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳ ಅನುಸಾರ ರಾಷ್ಟ್ರೀಯ ಮತದಾರರ ದಿನ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ವಿಶೇಷ ಧ್ಯೇಯವಾಕ್ಯದ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕಿದೆ. ಅಭಿಯಾನ, ಕ್ಷೇತ್ರ ಕಾರ್ಯಕ್ರಮಗಳು, ಪರಸ್ಪರ ಸಂವಹನ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತು ಪೋಸ್ಟರ್, ಬ್ಯಾನರ್‌ಗಳನ್ನು ಅಳವಡಿಸಬೇಕು. ಜಿಲ್ಲಾ ಚುನಾವಣಾ ರಾಯಭಾರಿಗಳ ಸಹಕಾರದೊಂದಿಗೆ ಮತದಾರರ ದಿನಾಚರಣೆ ಕುರಿತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮ ಆಚರಿಸಲು ನಿರ್ದೇಶನ ನೀಡಬೇಕು. ಮತದಾರರು ಪ್ರತಿಜ್ಞಾವಿಧಿ ಸ್ವೀಕರಿಸಬೇಕು ಎಂದು ತಿಳಿಸಿದರು.

ಹೊಸದಾಗಿ ನೋಂದಾಯಿಸಿಕೊಂಡಿರುವ ಯುವ ಮತದಾರರಿಗೆ ರಾಷ್ಟ್ರೀಯ ಮತದಾರರ ದಿನದಂದು ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ (ಎಪಿಕ್) ವಿತರಿಸಬೇಕು. ಅಂಚೆ ಮತಪತ್ರ ಸೌಲಭ್ಯ, ಮತದಾರರಿಗೆ ಮತಗಟ್ಟೆಗಳಲ್ಲಿ ಒದಗಿಸಿರುವ ಮೂಲ ಸೌಲಭ್ಯ, ಇವಿಎಂ, ವಿವಿ ಪ್ಯಾಟ್, ಮತದಾರರ ಸಹಾಯವಾಣಿ, ವೋಟರ್ ಹೆಲ್ಪ್‌ಲೈನ್, ನೈತಿಕ ಮತದಾನ ಇನ್ನಿತರ ಬಗ್ಗೆ ಜಾಗೃತಿ ಚಿತ್ರಗಳನ್ನು ಪ್ರದರ್ಶಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾರೋತ್ ಮಾತನಾಡಿ, ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಮತದಾರರ ದಿನಾಚರಣೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಬೇಕಿದೆ. ಸ್ವೀಪ್ ಕಾರ್ಯಕ್ರಮಗಳನ್ನು ಸಹ ಆಯೋಜಿಸಬೇಕಿದೆ ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net