

ಸಾಗರ: ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ, ನಾಯಕತ್ವ ಗುಣ ಮತ್ತು ರಾಷ್ಟ್ರಾಭಿಮಾನ ಬೆಳೆಸುವಲ್ಲಿ ಸೇವಾದಳ ಪಾತ್ರ ಪ್ರಮುಖವಾಗಿದೆ. ರಾಷ್ಟ್ರ ಮೊದಲು ಎನ್ನುವ ಮನೋಭಾವ ಸೇವಾದಳದ ಮೂಲಕ ಮಕ್ಕಳಲ್ಲಿ ಮೂಡಿಸಲು ಸಾಧ್ಯ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದ ಅಂಗವಾಗಿ ಸಾಗರದ ಬೆಳಲಮಕ್ಕಿ ಶಾಲೆಯಲ್ಲಿ ಮಂಗಳವಾರ ಭಾರತ್ ಸೇವಾದಳ ಆಯೋಜಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾ.ಸು.ಹರ್ಡೀಕರ್ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ಉತ್ತೇಜನ ತುಂಬಲು ಪೂರಕವಾಗಿ ಸೇವಾದಳ ಘಟಕ ಆರಂಭಿಸಿದರು ಎಂದರು.
ಸ್ವಾತಂತ್ರಾೃನಂತರ ಸೇವಾದಳ ಚಟುವಟಿಕೆ ಸ್ವಲ್ಪ ವಿಮುಖಗೊಂಡಿತ್ತು. ಬದಲಾದ ದಿನಗಳಲ್ಲಿ ಸೇವಾದಳ ಘಟಕ ಅತ್ಯಂತ ಚುರುಕಾಗಿ ನಡೆಯುತ್ತಿದೆ. ಶಿಸ್ತಿನ ಜತೆಗೆ ಸೇವಾ ಮನೋಭಾವ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಸೇವಾದಳ ತಾಲೂಕು ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ತರಬೇತಿಯನ್ನು ಸೇವಾದಳ ಕಾಲಕಾಲಕ್ಕೆ ನೀಡುತ್ತಿದೆ. ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಸೇವಾದಳದ ವಿಶೇಷ ಕಾರ್ಯಗಳಲ್ಲಿ ಒಂದು. ಸಾವಿರಾರು ಮಕ್ಕಳು ಜಾಥಾದಲ್ಲಿ ಪಾಲ್ಗೊಂಡಿದ್ದು ಸ್ಮರಣೀಯ ಎಂದರು.