ರಾಷ್ಟ್ರೀಯ ಪುರಸ್ಕಾರಕ್ಕೆಡಾ.ಎಸ್.ಜಿ.ಸುಶೀಲಮ್ಮ ಆಯ್ಕೆ

S_G_suhilamma
Published on

ಬಸವಕಲ್ಯಾಣ: ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ಪ್ರತಿವರ್ಷ ನೀಡುವ ಪ್ರತಿಷ್ಠಿತ ಶರಣ ವಿಜಯ ರಾಷ್ಟ್ರೀಯ ಪುರಸ್ಕಾರಕ್ಕೆ ಸಮಾಜ ಸೇವಕಿ, ಬೆಂಗಳೂರು ಸುಮಂಗಲಿ ಸೇವಾಶ್ರಮದ ಸಂಸ್ಥಾಪಕ ಅಧ್ಯಕ್ಷೆ ಡಾ.ಎಸ್.ಜಿ.ಸುಶೀಲಮ್ಮ ಅವರನ್ನು ಆಯ್ಕೆ ಮಾಡಲಾಗಿದೆ.

ನಗರದ ಹರಳಯ್ಯ ಗವಿಯಲ್ಲಿ ಅ.೧೫ರಿಂದ ೨೪ರವರೆಗೆ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನ ಆಚರಣೆ ನಡೆಯಲಿದ್ದು, ೨೩ರಂದು ನಡೆಯುವ ಶರಣ ವಿಜಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ, ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ತಿಳಿಸಿದ್ದಾರೆ.

೨೦೧೭ರಲ್ಲಿ ಪ್ರಶಸ್ತಿ ಆರಂಭಿಸಲಾಗಿದೆ. ಶರಣ ಸಾಹಿತ್ಯ, ಬಸವತತ್ತ್ವ ಪ್ರಸಾರ, ಧಾರ್ಮಿಕ, ಸಾಮಾಜಿಕ, ಸಂಗೀತ, ಕಲೆ ಸೇರಿ ವಿವಿಧ ಕ್ಷೇತ್ರದ ಏಳು ಸಾಧಕರಿಗೆ ಇದುವರೆಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಲೋಕನಾಯಕ ಭೀಮಣ್ಣ ಖಂಡ್ರೆ, ಬಸವ ಟಿವಿಯ ಈ. ಕೃಷ್ಣಪ್ಪ, ಶತಾಯುಷಿ ವಿ.ಸಿದ್ಧರಾಮಣ್ಣ ಶರಣರು, ಇಷ್ಟ ಲಿಂಗಯೋಗ ವಿಜ್ಞಾನಿ ಡಾ.ಅಮರನಾಥ ಸೋಲಪುರೆ, ಕಲೆಗಾರ ಚ.ಬಿ.ಸೋಮಶೆಟ್ಟಿ., ಸಂಗೀತಗಾರ ಡಾ.ಮೃತ್ಯುಂಜಯ ಶೆಟ್ಟರ್ ಅವರಿಗೆ ನೀಡಿ ಗೌರವಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net