

ಚಿತ್ರದುರ್ಗ: ನಗರದ ಹೊರವಲಯ ಗೋನೂರು ಹೋಟೆಲ್ ವೊಂದರ ಸಮೀಪ ನಡೆದಿದ್ದ ಹಿರಿಯೂರು ತಾಲೂಕು ಕೋವೆರಹಟ್ಟಿಯ ವಿದ್ಯಾರ್ಥಿನಿ ವರ್ಷಿತಾಳ ಭೀಕರ ಹತ್ಯೆ ಪ್ರಕರಣ ಕುರಿತಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಆಯೋಗದ ನಿರ್ದೇಶಕ ಜಗನ್ನಾಥ್ ವಿಚಾರಣೆಗಾಗಿ ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿದ್ದರು.
ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಎಸ್‌ಪಿ ರಂಜಿತ್‌ಕುಮಾರ್‌ಬಂಡಾರು ಹಾಗೂ ಜಿಪಂ ಸಿಇಒ ಡಾ.ಎಸ್. ಆಕಾಶ್ ಅವರೊಂದಿಗೆ ಚರ್ಚಿಸಿದ ನಿರ್ದೇಶಕರು, ಎಸ್‌ಪಿ ಅವರೊಂದಿಗೆ ಹತ್ಯೆ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ವಿದ್ಯಾರ್ಥಿನಿ ಓದುತ್ತಿದ್ದ ನಗರದ ಡಾ. ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ಕೊಟ್ಟು ದಾಖಲೆಗಳನ್ನು ಪರಿಶೀಲಿಸಿದರು.
ಹಿರಿಯೂರು ತಾಲೂಕು ಕೋವೆರಹಟ್ಟಿಯ ವರ್ಷಿತಾ ಮನೆಗೆ ಭೇಟಿ ನೀಡಿ, ಆಕೆಯ ತಾಯಿ ಜ್ಯೋತಿ ಅವರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ದೊರಕುವ ಸೌಲಭ್ಯ ನೀಡಲಾಗಿದ್ದು, ಇನ್ನೂ ಹೆಚ್ಚಿನ ಸೌಲಭ್ಯಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಆಯೋಗದ ತನಿಖಾಧಿಕಾರಿಗಳಾದ ರಿತಿಕಾ, ನಂದಕಿಶೋರ್, ಎಸಿ ಮೆಹಬೂಬ್‌ಜಿಲಾನಿ ಖುರೇಷಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ್, ಐಮಂಗಲ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಟಿ. ದೀಪು ಇದ್ದರು.