ರಾಷ್ಟ್ರೀಯ ಪಕ್ಷಕ್ಕಿಲ್ಲ ನೀರಾವರಿ ಬದ್ಧತೆ: ಗೌರಿಬಿದನೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಆಕ್ರೋಶ

16 gbd 4
Published on

ಗೌರಿಬಿದನೂರು: ರಾಜ್ಯಕ್ಕೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಕಾಂಗ್ರೆಸ್, ಬಿಜೆಪಿಗೆ ಬದ್ಧತೆಯಿಲ್ಲ. ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಿವೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದ ಉತ್ತರ ಪಿನಾಕಿ ನದಿ ದಡದ ಶ್ರೀ ಆಂಜನೇಯ ದೇವಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಲಧಾರೆ ರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ರಾಜ್ಯ ಮತ್ತು ರಾಷ್ಟ್ರಕ್ಕೆ ಹಲವು ನೀರಾವರಿ ಯೋಜನೆಗಳನ್ನು ನೀಡಿದ್ದಾರೆ. ಬೆಂಗಳೂರಿನ ನೀರಿನ ಅಭಾವವನ್ನು ದೃಷ್ಟಿಯಲ್ಲಿರಿಸಿಕೊಂಡು 9 ಟಿಎಂಸಿ ಕಾವೇರಿ ನೀರು ಹರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ನೀರಾವರಿ ವಿಚಾರದಲ್ಲಿ ಜೆಡಿಎಸ್ ತೋರಿರುವ ಬದ್ಧತೆಯನ್ನು ರಾಷ್ಟ್ರೀಯ ಪಕ್ಷಗಳು ತೋರುತ್ತಿಲ್ಲ. ಈ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಎರಡೂ ಪಕ್ಷಗಳು ನಾಟಕವಾಡುತ್ತಿವೆ.ಎತ್ತಿನಹೊಳೆ ಯೋಜನೆ ಪ್ರಾರಂಭದಲ್ಲಿ 8 ಸಾವಿರ ಕೋಟಿ ಇತ್ತು. ಬಳಿಕ 23 ಸಾವಿರ ಕೋಟಿ ರೂ.ಗೆ ಹೆಚ್ಚಳವಾಯಿತು. ಮುಂದೆ 50 ಸಾವಿರ ಕೋಟಿ ರೂ. ತಲುಪಿದರೂ ಅಚ್ಚರಿಯಿಲ್ಲ. ಆದರೆ ಯೋಜನೆ ಯಾವಾಗ ಮುಕ್ತಾಯವಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಹಣ ಲೂಟಿಗೆ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಆಪಾದಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಸಿ.ಮಂಜುನಾಥ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಈ ಹಿಂದೆ ಜೆಡಿಎಸ್ ಸರ್ಕಾರ ನೀರಾವರಿ ಯೋಜನೆಗಳಿಗೆ ಒತ್ತು ನೀಡಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಅಧಿಕಾರ ನೀಡಿದರೆ ಮುಂದಿನ ಐದು ವರ್ಷದ ಅಧಿಕಾರವಧಿಯಲ್ಲಿ ಬಾಕಿ ಮತ್ತು ಹೊಸ ನೀರಾವರಿ ಯೋಜನೆಗಳನ್ನು ಪೂರ್ಣಗೊಳಸಿ ಸಮಗ್ರ ಜಲ ಸಂರಕ್ಷಣೆ ಮಾಡುವ ಕುರಿತು ಜನರಿಗೆ ವಾಗ್ದಾನ ಮಾಡಲು ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಕುಂಭ ಕಳಶ ಹೊತ್ತ ಮಹಿಳೆಯರು ಪವಿತ್ರ ಜಲವನ್ನು ಸಂಗ್ರಹಮಾಡಿ ಪೂಜೆ ಮಾಡಿ ಬಳಿಕ ರಥದಲ್ಲಿ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಥವು ನಗರ, ಚಿಕ್ಕ ಕುರುಗೋಡು, ವಿದುರಾಶ್ವತ್ಥಕ್ಕೆ ತೆರಳಿತು.

ಜಿಪಂ ಮಾಜಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ, ತಾಲೂಕು ಅಧ್ಯಕ್ಷ ಸಿ.ಮಂಜುನಾಥರೆಡ್ಡಿ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಮಾಜಿ ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ, ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ರಾಜ್ಯಕಾರ್ಯದರ್ಶಿ ಸೈಯದ್ ರೋಷನ್ ಅಬ್ಬಾಸ್, ಮುಖಂಡರಾದ ಸಮೃದ್ಧಿ ಮಂಜುನಾಥ್, ಇಡಗೂರು ನವೀನ್ ಇತರರಿದ್ದರು.

2023ಕ್ಕೆ ಜೆಡಿಎಎಸ್‌ಗೆ ಅಧಿಕಾರ: ರಾಜ್ಯದ ನೀರಾವರಿ ಯೋಜನೆಗಳಿಗೆ ಮಾಜಿ ಪ್ರಧಾನಿ ದೇವೇಗೌಡರು ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಜನ ಸಂಪನ್ಮೂಲ ಸಚಿವರೇ ವಿಧಾನಸಭೆ ಅಧಿವೇಶನದಲ್ಲಿ ಹೇಳಿದ್ದಾರೆ. ಇದು ನೀರಾವರಿ ಬಗ್ಗೆ ದೇವೇಗೌಡರಿಗೆ ಹಾಗೂ ಪಕ್ಷಕ್ಕಿರುವ ಬದ್ಧತೆ ತೋರಿಸುತ್ತದೆ. ಅಂತಾರಾಜ್ಯ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ತೋರುತ್ತಿರುವ ರಾಜಕೀಯ ಧೋರಣೆಯಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ದೇಶದಲ್ಲೇ ಮೊದಲ ಬಾರಿ ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಒಂದೂ ಹೊಸ ಯೋಜನೆ ಘೋಷಿಸಿಲ್ಲ. 2023ರಲ್ಲಿ ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರನ್ನು ಅಧಿಕಾರಕ್ಕೆ ತರುವುದು ಖಚಿತ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು.

ಬಿಜೆಪಿ ಬೆಂಕಿ, ಕಾಂಗ್ರೆಸ್ ಮೌನ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದೇಶದ ಮುಸ್ಲಿಂ, ಕ್ರೈಸ್ತರು ಯಾರಿಗೂ ಬೇಡವಾಗಿದ್ದಾರೆೆ. ಬಿಜೆಪಿ ಆಡಳಿತದಲ್ಲಿ ಹಿಂದುಪರ ಸಂಘಟನೆಗಳು ಸಾಮರಸ್ಯ ಹಾಳು ಮಾಡುತ್ತಿವೆ. ಅಧಿಕಾರದ ಆಸೆಗಾಗಿ ಜನರನ್ನು ಬೀದಿಗೆ ಬಿಟ್ಟು ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಮುಖ್ಯಮಂತ್ರಿ ನೋಡುತ್ತ ಕುಳಿತಿದ್ದಾರೆ. ಇನ್ನು ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಒಂದು ವರ್ಗದ ಮತಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಆತಂಕದಲ್ಲಿ ಮೌನಕ್ಕೆ ಶರಣಾಗಿದೆ. ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ 15 ದಿನಗಳಿಂದ ವಾಸ್ತವ ಮಾತನಾಡುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಒಮ್ಮೆ ಸಂಪೂರ್ಣ ಅಧಿಕಾರ ನೀಡಿ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರದಲ್ಲಿದ್ದಾಗ ರೈತ ಪರ, ಜನಪರವಾಗಿ ಕೆಲಸ ಮಾಡಿದೆ. ರಾಜ್ಯಕ್ಕೆ ನೀರಾವರಿ ಸೇರಿ ಇತರ ವಿಚಾರಗಳಲ್ಲಿ ಆಗುತ್ತಿರುವ ಅನ್ಯಾಯಗಳಿಗೆ ಉತ್ತರ ನೀಡಲಿದೆ. ಈಗಾಗಲೆ ಪಕ್ಷ ಪ್ರಣಾಳಿಕೆ ಸಿದ್ಧಪಡಿಸಿದ್ದು ಜನರ ನಿರೀಕ್ಷೆ ಮೀರಿ ಉತ್ತಮ ಕೆಲಸ ಮಾಡಲಿದೆ. ರಾಷ್ಟ್ರೀಯ ಪಕ್ಷಗಳ ನಡವಳಿಕೆ ಗಮನದಲ್ಲಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಐದು ವರ್ಷ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳಕ್ಕೆ ಸಂಪೂರ್ಣ ಅಧಿಕಾರ ನೀಡಿ. ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.

ಜೆಡಿಎಸ್ ಶಕ್ತಿ ಪ್ರದರ್ಶನ: ತಾಲೂಕಿನ ಮೂಲೆ ಮೂಲೆಯಿಂದ ಆಗಮಿಸಿದ್ದ ಕಾರ್ಯಕರ್ತರು ಶಕ್ತಿ ಪ್ರದರ್ಶನ ನಡೆಸಿದರು. ಪ್ರವಾಸಿ ಮಂದಿರದಿಂದ ಬೈಕ್ ರ‌್ಯಾಲಿ ನಡೆಸಿ ಗಮನ ಸೆಳೆದರು. ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ದು ಯುವ ಕಾರ್ಯಕರ್ತರಲ್ಲಿ ಮತ್ತಷ್ಟು ಹುಮ್ಮಸ್ಸು ಮೂಡಿಸಿತ್ತು.ಥ ಯಾತ್ರೆಗೆ ಬೆಂಬಲವಾಗಿ ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿದರು.

ಆಂಧ್ರ, ತೆಲಂಗಾಣ, ತಮಿಳುನಾಡುಗಳಲ್ಲಿ ಪ್ರಾದೇಶಿಕ ಪಕ್ಷಗಳು ಉತ್ತಮ ಆಡಳಿತ ನೀಡುತ್ತಿವೆ. ರಾಜ್ಯದ ಅಭಿವೃದ್ಧಿ ಹಾಗೂ ಹಿತ ಕಾಪಾಡುವ ದೃಷ್ಟಿಯಿಂದ ನಮ್ಮ ರಾಜ್ಯಕ್ಕೂ ಪ್ರಾದೇಶಿಕ ಪಕ್ಷದ ಅನಿವಾರ್ಯತೆಯಿದೆ. 2023ರ ಚುನಾವಣೆಯಲ್ಲಿ ಕುಮಾರಸ್ವಾಮಿಗೆ ಸಂಪೂರ್ಣ ಅಧಿಕಾರ ನೀಡುವ ಮೂಲಕ ಶಕ್ತಿ ತೋರಿಸಬೇಕಿದೆ. ಕೆ.ಪಿ.ಬಚ್ಚೇಗೌಡ, ಮಾಜಿ ಶಾಸಕ ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net