

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶಾಖಪಟ್ಟಣದ ಸ್ವರ್ಣ ಭಾರತಿ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 39ನೇ ರಾಷ್ಟ್ರಮಟ್ಟದ ಜ್ಯೂನಿಯರ್ ಟೆಕ್ವಾಂಡೋ ಚಾಂಪಿಯನಶಿಪ್‌ನಲ್ಲಿ ಜಿಲ್ಲಾ ಟೆಕ್ವಾಂಡೋ ಸಂಸ್ಥೆಯ ವಿದ್ಯಾರ್ಥಿಗಳು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಉತ್ತಮ ಸಾಧನೆಗೈದಿದ್ದಾರೆ.
ಬಾಲಕಿಯರ ಜ್ಯೂನಿಯರ್ ವಿಭಾಗದಲ್ಲಿ ಅದಿತಿ ಪರಪ್ಪ ಕ್ಷಾತ್ರತೇಜ (ಕರ್ನಾಟಕ ಸೈನ್ಸ್ ಕಾಲೇಜ್) ಬೆಳ್ಳಿ ಪದಕ ಪಡೆದಿದ್ದಾಳೆ. ಬಾಲಕರ ಜ್ಯೂನಿಯರ್ ವಿಭಾಗದಲ್ಲಿ ಸಾಯಿಪ್ರಸಾದ ಪರಪ್ಪ ಕ್ಷಾತ್ರತೇಜ (ಪವನ ಇಂಗ್ಲಿಷ್ ಮೀಡಿಯಂ ಸ್ಕೂಲ್) ಕಂಚಿನ ಪದಕ, ಜ್ಯೂನಿಯರ್ ವಿಭಾಗದಲ್ಲಿ ಖುಷಿ ಜಿ. ಕುಡಸೋಮಣ್ಣವರ (ಶ್ರೀ ಸಾಯಿ ಪಿಯು ಕಾಲೇಜ್) ಹಾಗೂ ಸುಪ್ರೀತ್ ಥಿಟೆ (ಶ್ರೀ ಸಾಯಿ ಪಿಯು ಕಾಲೇಜ್) ಉತ್ತಮ ಪ್ರದರ್ಶನ ನೀಡಿದ್ದಾರೆ. ರಾಜ್ಯ ತಂಡದ ತರಬೇತುದಾರರಾಗಿ ಮಾಸ್ಟರ್ ಅಂಜಲಿ ಪರಪ್ಪ ಕ್ಷಾತ್ರತೇಜ ಪ್ರಯಾಣಿಸಿದ್ದರು.
ಸಾಧಕ ಕ್ರೀಡಾಪಟುಗಳನ್ನು ಜಿಲ್ಲಾ ಟೆಕ್ವಾಂಡೋ ಸಂಸ್ಥೆಯ ಅಧ್ಯಕ್ಷ ಆನಂದ ಕುಲಕರ್ಣಿ, ಉಪಾಧ್ಯಕ್ಷ ಬಿ.ಎಸ್. ತಾಳಿಕೋಟಿ, ರಾಷ್ಟ್ರೀಯ ತರಬೇತುದಾರ ಪರಪ್ಪ ಎಸ್.ಕೆ., ಸಹಾಯಕ ತರಬೇತುದಾರ ಆನಂದ ಕಿಟದಾಳ, ಇತರರು ಅಭಿನಂದಿಸಿದ್ದಾರೆ.