ರಾಷ್ಟ್ರೀಯ ಉದ್ಯಾನವನ ಒಂದು ವಾರ ಬಂದ್; ಅರಣ್ಯ ಸಚಿವ ಆನಂದ್ ಸಿಂಗ್ ಮಾಹಿತಿ ಮರಿ ಆನೆ ಜತೆ ಮಗುವಿನಂತೆ ಆಟ

anekal
Published on

ಆನೇಕಲ್: ಕರೊನಾ ಹಿನ್ನೆಲೆ ಭಾನುವಾರದಿಂದ ಒಂದು ವಾರ ರಾಷ್ಟ್ರೀಯ ಉದ್ಯಾನವನಗಳು ಬಂದ್ ಆಗಲಿವೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಶನಿವಾರ ಭೇಟಿ ನೀಡಿ, ಕೆಲದಿನಗಳ ಹಿಂದೆ ಬನ್ನೇರುಘಟ್ಟ ಕಾಡಂಚಿನ ರಾಗಿಹಳ್ಳಿ ಬಳಿ ತಾಯಿ ಆನೆಯಿಂದ ಬೇರ್ಪಟ್ಟಿದ್ದ ಮರಿಯಾನೆ ಆರೋಗ್ಯ ವಿಚಾರಿಸಿ, ಅರಣ್ಯ ಅಧಿಕಾರಿಗಳ ಜತೆ ತುರ್ತುಸಭೆ ನಡೆಸಿದರು.

ಕರೊನಾ ವೈರಸ್ ಅತಿವೇಗವಾಗಿ ಹಬ್ಬುತ್ತಿದ್ದು, ಪ್ರವಾಸಿಗರ ಆರೋಗ್ಯ ದೃಷ್ಟಿಯಿಂದ ಒಂದು ವಾರದ ರಾಜ್ಯದ ಎಲ್ಲ ರಾಷ್ಟ್ರೀಯ ಉದ್ಯಾನವನಗಳನ್ನು ಬಂದ್ ಮಾಡಲಾಗುತ್ತಿದ್ದು, ಈ ಕುರಿತು ಆದೇಶ ಹೊರಡಿಸಲಾಗಿದೆ ಎಂದರು.

ಆನೇಕಲ್ ತಾಲೂಕಿನ ಚೂಡಹಳ್ಳಿಯಲ್ಲಿನ ಜನ ಅರಣ್ಯದ ಅಂಚಿನಲ್ಲಿರುವುದರಿಂದ ಮೂಲಸೌಕರ್ಯ ಹಾಗೂ ಕಾಡುಪ್ರಾಣಿಗಳ ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವ ಮಾಹಿತಿ ಬಂದಿದ್ದು, ಭಾನುವಾರ ಅಥವಾ ಸೋಮವಾರ ಅಧಿಕಾರಿಗಳ ಬಳಿ ಚರ್ಚಿಸಿ ಖುದ್ದು ಭೇಟಿ ನೀಡುವುದಾಗಿ ಹೇಳಿದರು.

ತಾಯಿಯಿಂದ ದೂರಾಗಿರುವ ಮರಿಯಾನೆ ಚೇತರಿಸಿಕೊಳ್ಳುತ್ತಿದೆ. ಪಾರ್ಕ್ ಸಿಬ್ಬಂದಿ ಉತ್ತಮ ಆರೈಕೆ ಮಾಡುತ್ತಿದ್ದಾರೆ. ಅದರ ತಾಯಿ ಸಿಕ್ಕಿಲ್ಲ ಎಂಬ ನೋವು ನಮಗೂ ಇದೆ ಎಂದ ಅವರು ಕೆಲಕಾಲ ಆನೆ ಮರಿಯೊಂದಿಗೆ ಮಗುವಿನಂತೆ ಆಟ ಆಡಿ, ಹಾಲುಣಿಸಿ ಎಲ್ಲರ ಗಮನ ಸೆಳೆದರು.

ಹಕ್ಕಿ ಜ್ವರಕ್ಕೆ ಕ್ರಮ: ಕರ್ನಾಟಕದ ಗಡಿ ಕೇರಳದಿಂದ ಹಕ್ಕಿಜ್ವರ ಹಬ್ಬುತ್ತಿದೆ ಎನ್ನುವ ವಿಚಾರದಲ್ಲಿ ಈಗಾಗಲೇ ಮೈಸೂರಿನಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದು ಬನ್ನೇರುಘಟ್ಟದಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರವಹಿಸಲು ಸೂಚಿಸಿದ್ದೇನೆ ಎಂದರು.

ಹುದ್ದೆ ಶಾಶ್ವತ ಅಲ್ಲ ಸೇವೆ ಮಾಡಬೇಕು: ಅರಣ್ಯ ಸಚಿವನಾಗಿ ಒಳ್ಳೆ ಕೆಲಸ ಮಾಡಲು ಅಧಿಕಾರಕ್ಕೆ ಬಂದಿದ್ದೇನೆ. ಬನ್ನೇರುಘಟ್ಟ ಅರಣ್ಯದ ಕೆಲ ಭಾಗವನ್ನು ಕೈಬಿಡಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿರುವ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನೊಮ್ಮೆ ಗಮನಹರಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಅರಣ್ಯ ಸಂಪತ್ತು ಉಳಿಸಬೇಕು ಎನ್ನುವ ಕಾರಣಕ್ಕೆ ಶ್ರಮವಹಿಸಿ ದುಡಿಯುತ್ತಿದ್ದೇನೆ. ಒಳ್ಳೆ ಕೆಲಸ ಮಾಡಬೇಕು ಎನ್ನುವ ಕಾರಣದಿಂದ ಸಚಿವನಾಗಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net