ರಾಷ್ಟ್ರೀಯ ಆಸ್ತಿಯಾಗಲಿ ಜಾನಪದ ಕಲೆ

Koppa janapada
ಕೊಪ್ಪ ಪುರಭವನದಲ್ಲಿ ಜಾನಪದ ಪರಿಷತ್ ಹಮ್ಮಿಕೊಂಡಿದ್ದ ಪ್ರಥಮ ಜಾನಪದ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷ ಎಚ್.ಎಂ.ರವಿಕಾಂತ್ ಉದ್ಘಾಟಿಸಿದರು. ಜಿ.ಬಿ.ಸುರೇಶ್ ನಿರಂಜನ್, ದಿವಾಕರ್ ಭಟ್, ಅನಿಲ್ ನಾರ್ವೆ, ಶ್ಯಾಮಲಾ, ನಿಶ್ಮಾ, ಶ್ರುತಿ ಇತರರಿದ್ದರು.
Published on

ಕೊಪ್ಪ: ಪಾಶ್ಚಿಮಾತ್ಯ ದೇಶಗಳು ಜಾನಪದ ಸಾಹಿತ್ಯ, ಕಲೆಗಳನ್ನು ರಾಷ್ಟ್ರೀಯ ಆಸ್ತಿಯಾಗಿ ಪರಿಗಣಿಸಿವೆ. ನಮ್ಮಲ್ಲಿಯೂ ಜನಪದ ಕಲೆಗಳನ್ನು ಉಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಬದುಕು ಅರ್ಥಹೀನವಾಗುತ್ತದೆ ಎಂದು ತಾಲೂಕು ಜಾನಪದ ಸಮ್ಮೇಳನಾಧ್ಯಕ್ಷ, ಸಾಹಿತಿ ಎಚ್.ಎಂ.ರವಿಕಾಂತ್ ತಿಳಿಸಿದರು.

ಪುರಭವನದಲ್ಲಿ ಭಾನುವಾರ ತಾಲೂಕು ಜಾನಪದ ಪರಿಷತ್ ಹಮ್ಮಿಕೊಂಡಿದ್ದ ಪ್ರಥಮ ಜಾನಪದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನಪದ ಕಲೆಗಳು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಮುದ ನೀಡುತ್ತವೆ. ಜನಾಂಗಗಳ ಸಾಂಸ್ಕೃತಿಕ ವಾಹಕಗಳಾದ ತಲೆಮಾರುಗಳ ಸಾಧನೆ ಸಾಕ್ಷಿಗಳಾಗಿ ಉಳಿದುಬಂದಿದೆ. ಜಾನಪದ ನಮ್ಮ ಸಂಸ್ಕೃತಿಯ ಅಡಿಪಾಯ. ಮಾನವನ ಉದಯದೊಡನೆ ಜನಪದದ ಉದಯವೂ ಆಯಿತು. ಜ್ಞಾನ, ನಂಬಿಕೆ, ಕಲೆ, ನೀತಿ, ಕಾನೂನು, ಸಂಪ್ರದಾಯ ಮತ್ತು ರೂಢಿಗಳೆಲ್ಲ ಮಾನವನಿಂದ ಹುಟ್ಟಿಕೊಂಡವು. ಇಂಥ ಅಭ್ಯಾಸಗಳೇ ಸಂಸ್ಕೃತಿ ಎನಿಸಿಕೊಳ್ಳುತ್ತವೆ ಎಂದು ತಿಳಿಸಿದರು.

ಜಾನಪದ ಕಲೆ, ಕರಕುಶಲ, ಸಂಪ್ರದಾಯ, ನಂಬಿಕೆ, ಸಂಗೀತ, ನೃತ್ಯ, ಆಟ, ಸಂಕೇತಗಳು, ಕಥೆ, ಗ್ರಂಥಕತೆಗಳು, ಲಾವಣಿ, ಪೌರಾಣಿಕ ಕಥೆ, ಮಹಾಕಾವ್ಯ, ಗಾದೆಗಳು, ಒಗಟುಗಳೆಂಬ ಅಂಶಗಳನ್ನು ಒಳಗೊಂಡಿದೆ. ಮಾನವನ ಜೀವನ ಕ್ರಮ ಜಾನಪದದಿಂದ ಪ್ರೇರಿತವಾಗಿದೆ. ಜಾನಪದ ಕಲೆಗಳ ಹುಟ್ಟಿಗೂ, ಮನುಷ್ಯನ ಇತಿಹಾಸಕ್ಕೂ ಬಿಡಿಸಲಾಗದ ನಂಟು. ಸಂಸ್ಕೃತಿ ವಿಕಾಸಗೊಂಡಂತೆ ಮನುಷ್ಯನ ಬದುಕು ವಿಕಾಸಗೊಳ್ಳುತ್ತ ಹೋಯಿತು. ಸಮುದಾಯದ ಜೀವನಾನುಭವಗಳಿಗೆ ಅಭಿವ್ಯಕ್ತಿ ರೂಪ ನೀಡಲು ಹವಣಿಸಿದಾಗ ಹಲವು ಬಣ್ಣಗಳು ಹುಟ್ಟಿಕೊಂಡವು. ಜಾನಪದ ಕಲೆಗಳು ಸಮುದಾಯ ಮತ್ತು ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧಗಳಿಸಿಕೊಂಡು ಕಲಾಪರಿಣಿತಿಗೆ ಹೆಸರಾದವು ಎಂದು ವಿಶ್ಲೇಷಿಸಿದರು.

ಇತ್ತೀಚಿನ ದಿನದಲ್ಲಿ ಜಾನಪದ ಆಲೋಚನ ಕ್ರಮವೇ ಬದಲಾಗಿದೆ. ಪಾಶ್ಚಿಮಾತ್ಯರ ಸಿದ್ಧಾಂತಗಳು ನಮಗೆ ಮಾರ್ಗದರ್ಶನ ನೀಡುತ್ತಿವೆ. ಅವುಗಳಿಂದ ನಮ್ಮ ಸಂಸ್ಕೃತಿ, ವಿಜ್ಞಾನ, ಇಬ್ಭಾಗವಾಗಿದೆ. ಪಾಶ್ಚಾತ್ಯರು ಅವರ ಭೌತಿಕ ಶೋಧನೆಗಳೆಂದು ಮಾತ್ರ ಹೇಳಿಕೊಂಡು ಅದರ ನೆರಳಿನಲ್ಲಿ ಸಂಸ್ಕೃತಿ ರೂಪಿಸಿಕೊಂಡರು. ಪ್ರತಿ ಸಂಸ್ಕೃತಿ ಒಳಗೂ ವಿಜ್ಞಾನವಿದೆ ಹಾಗೂ ಅದು ತನ್ನನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸುತ್ತ ಹೋಗುತ್ತದೆ. ಈ ಸತ್ಯ ನಮಗೆ ಇತ್ತೀಚೆಗೆ ಗೋಚರವಾಗುತ್ತಿರುವುದು ಒಳ್ಳೆಯ ವಿಚಾರ ಎಂದು ಅಭಿಪ್ರಾಯಪಟ್ಟರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಪಾಲಕರು ಎಡವುತ್ತಿದ್ದಾರೆ. ಆಧುನಿಕತೆಗೆ ಒಗ್ಗಿಕೊಳ್ಳುವ ಭರದಲ್ಲಿ ಜನಪದವನ್ನು ಮರೆಯುತ್ತಿದ್ದೇವೆ. ಇದರಿಂದ ಮಕ್ಕಳಲ್ಲಿ ಜಾನಪದದ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಸರ್ಕಾರ ಜಾನಪದವನ್ನು ಉಳಿಸಲು ಹೆಚ್ಚು ಅನುದಾನ ನೀಡಬೇಕು. ಹಳ್ಳಿಗಳಲ್ಲಿ ಉಳಿದಿರುವ ಜಾನಪದ ಮುಂದಿನ ಪೀಳಿಗೆಗೆ ತಲುಪಿಸಬೇಕು. ಈ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡ ಮಾಲ್ತೇಶ್ ಸಿಗಸೆ ಮಾತನಾಡಿ, ಮನುಷ್ಯನ ಬದುಕು ಹೇಗೆ ಇರುಬೇಕು, ಅಂಕು-ಡೊಂಕುಗಳು, ಇತರ ಸಂಗತಿಗಳನ್ನು ಜಾನಪದದಲ್ಲಿ ಕಟ್ಟಿಕೊಡಲಾಗಿದೆ. ನಮ್ಮ ಬದುಕಿನ ಮೇಲಿನ ಎಲ್ಲ ವಿಚಾರಗಳ ಮೇಲೆ ಜಾನಪದವಿದೆ. ಆದರೆ ಯಾಂತ್ರೀಕೃತ ಬದುಕಿನಲ್ಲಿ ನಾವು ಸಾಗುತ್ತಿರುವ ಕಾರಣ ಜನಪದಗಳು ಹುಟ್ಟಿಬರುತ್ತಿಲ್ಲ ಎಂದರು.

ಸಮ್ಮೇಳನದ ಗೌರವಾಧ್ಯಕ್ಷ ಎಸ್.ಎನ್.ರಾಮಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರಂಜನ್, ಕಜಾಪದ ತಾಲೂಕು ಅಧ್ಯಕ್ಷ ದಿವಾಕರ್ ಭಟ್, ಪ್ರಧಾನ ಕಾರ್ಯದರ್ಶಿ ಅನಿಲ್ ನಾರ್ವೆ, ಸತೀಶ್ ಅದ್ದಡ, ಶ್ಯಾಮಲಾ, ತಮನ್ನಾ ಮುನ್ನಾವರ್, ನಿಶ್ಮಾ ರಾಘವೇಂದ್ರ, ಶ್ರುತಿ ರೋಹಿತ್ ಇತರರಿದ್ದರು.

ತಾಲೂಕು ಪ್ರಥಮ ಜಾನಪದ ಸಮ್ಮೇಳನದ ಪ್ರಯುಕ್ತ ಪಟ್ಟಣದ ಬಸ್ ನಿಲ್ದಾಣದಿಂದ ಪುರಭವನದವರಗೆ ಪೂರ್ಣಕುಂಭ ಸ್ವಾಗತದ ಜತೆಯಲ್ಲಿ ವಿವಿಧ ಜಾನಪದ ನೃತ್ಯ ತಂಡಗಳ ಮೂಲಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಜಾನಪದ ನೃತ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ವಿಚಾರ ಗೋಷ್ಠಿಯನ್ನು ಎಸ್.ಎಸ್.ವೆಂಕಟೇಶ್ ನಡೆಸಿಕೊಟ್ಟರು. ಸಭೆಯಲ್ಲಿ ಮಾಜಿ ಸಚಿವ ಡಿ.ಎನ್. ಜೀವರಾಜ್ ಸಮ್ಮೇಳನಾಧ್ಯಕ್ಷ ಎಚ್.ಎಂ.ರವಿಕಾಂತ್ ಅವರನ್ನು ಗೌರವಿಸಿದರು. ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಆರ್.ಡಿ.ರವೀಂದ್ರ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net