

ಹಾಸನ: ಭ್ರೂಣ ಹತ್ಯೆ ಮಹಾ ಅಪರಾಧವಾಗಿದ್ದು, ರಾಜ್ಯದಲ್ಲಿ ಈ ಪ್ರಕರಣಗಳು ಹೆಚ್ಚುತ್ತಿರುವುದು ಬೇಸರದ ವಿಚಾರ ಎಂದು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಚೇತನ್ ಅವರು ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನ-2023ಕ್ಕೆ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿರುವುದು ಆತಂಕ ಮೂಡಿಸಿದೆ. ಇದು ಕರ್ನಾಟಕ ಮಾತ್ರವಲ್ಲದೆ ಎಲ್ಲಾ ರಾಜ್ಯಗಳಲ್ಲೂ ನಡೆಯುತ್ತಿರುವ ಘಟನೆಯಾಗಿದೆ. ಭ್ರೂಣ ಹತ್ಯೆ ಮಾಡುವುದು ಕಾನೂನು ಬಾಹಿರವಾಗಿದ್ದು, ಈ ಅನಿಷ್ಠದ ವಿರುದ್ಧ ಎಲ್ಲರು ಹೋರಾಡಲೇಬೇಕಿದೆ. ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಗ್ರಾಮೀಣ ಜನರ ಮುಗ್ಧತೆಯನ್ನು ದುರುಪಯೋಗ ಮಾಡಿಕೊಳ್ಳುವ ಇಂತಹವರ ವಿರುದ್ಧ ಎಚ್ಚರಿಕೆ ವಹಿಸಬೇಕು. ಅದಕ್ಕಾಗಿಯೇ ಬೀದಿ ನಾಟಕದ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಸಂತೆ, ಜಾತ್ರೆಯಂತಹ ಪ್ರದೇಶಗಳಲ್ಲಿ ಕಲಾವಿದರು ಜಾಗೃತಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.
ತಾಯಿ ಮತ್ತು ಶಿಶು ಮರಣ, ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮ, ಸರ್ಕಾರಿ ಆಸ್ಪತ್ರೆಯ ಸೌಲಭ್ಯ ಸೇರಿ ಎಲ್ಲ ಕಾರ್ಯಕ್ರಮಗಳ ಕುರಿತು ಅ ರಿವು ಮೂಡಿಸುವ ಉದ್ದೇಶ ಹಾಕಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಅನೀಲ್, ಡಾ. ಹರೀಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಶಿವಶಂಕರ್, ಮಂಜುಳಾ, ಕಲಾವಿದ ಬಿ.ಟಿ.ಮಾನವ, ಗ್ಯಾರಂಟಿ ರಾಮಣ್ಣ ಇತರರಿದ್ದರು