

ಯಲ್ಲಾಪುರ: ತಾಲೂಕಿನ ಅರಬೈಲ್ ಹಾಗೂ ಆರತಿಬೈಲ್ ಘಟ್ಟ ಪ್ರದೇಶದಲ್ಲಿ ಸಂಪೂರ್ಣ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿಗೆ ಅಂತೂ ತೇಪೆ ಭಾಗ್ಯ ದೊರಕಿದೆ. ಹೆದ್ದಾರಿಯಲ್ಲಿನ ಹೊಂಡಗಳನ್ನು ಮುಚ್ಚುವ ಕಾರ್ಯವನ್ನು ಇಲಾಖೆ ಆರಂಭಿಸಿದೆ.
ಆರತಿಬೈಲ್ ಘಟ್ಟದಲ್ಲಿ ಹಾಗೂ ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ ತೀರಾ ಹಾಳಾದ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿತ್ತು. ರಸ್ತೆ ಹದಗೆಟ್ಟಿದ್ದರಿಂದ ನಿತ್ಯ 2-3 ವಾಹನಗಳು ಪಲ್ಟಿಯಾಗುವುದು, ಡಿಕ್ಕಿ ಇತ್ಯಾದಿ ಅವಘಡಗಳು ನಡೆಯುವುದು ಸಾಮಾನ್ಯವಾಗಿತ್ತು. ಇದರಿಂದ ಪದೇಪದೆ ಟ್ರಾಫಿಕ್ ಸಮಸ್ಯೆ ಉಂಟಾಗುವುದರಿಂದ ಪ್ರಯಾಣಿಕರು ಹೈರಾಣಾಗುವಂತಾಗಿತ್ತು. ಇದೀಗ ಹೆದ್ದಾರಿಗೆ ತೇಪೆ ಹಾಕಲು ಮುಂದಾಗಿರುವುದು ಅಲ್ಪಮಟ್ಟಿಗೆ ಸವಾರರಿಗೆ ಅನುಕೂಲವಾಗಿದೆ.
ದುರಸ್ತಿ ಕಾಮಗಾರಿ ನಡೆಯುವ ವೇಳೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಆದರೂ ರಸ್ತೆಯ ಎರಡೂ ಕಡೆಗಳಲ್ಲಿ ನಿಂತ ವಾಹನಗಳನ್ನು ಸರತಿಯಂತೆ ಸಂಚರಿಸಲು ಅವಕಾಶ ನೀಡಿ ಟ್ರಾಫಿಕ್ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದೇ ಸಮಯದಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಕಾರುಗಳ ಚಾಲಕರು ವಾಹನಗಳ ಸಾಲಿನ ಮಧ್ಯೆ ತಮ್ಮ ವಾಹನ ತಂದು ನಿಲ್ಲಿಸಿ, ಇನ್ನಷ್ಟು ಟ್ರಾಫಿಕ್ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಇದರಿಂದ ಹೆದ್ದಾರಿ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿದೆ.ರಸ್ತೆ ಕಾಮಗಾರಿಗೂ ಇದು ಸಮಸ್ಯೆಯಾಗುತ್ತಿದ್ದು, ಟ್ರಾಫಿಕ್ ಸಮಸ್ಯೆ ಹೆಚ್ಚಾಗಲೂ ಇದು ಕಾರಣವಾಗುತ್ತಿದೆ. ಹೆದ್ದಾರಿ ದುರಸ್ತಿ ಕಾಮಗಾರಿ ಮುಗಿಯುವವರೆಗೂ ವಾಹನ ಸವಾರರು ಸಹಕರಿಸಬೇಕೆಂದು ವಿನಂತಿಸಿದ್ದಾರೆ.
ಕಾಮಗಾರಿ ವೇಳೆ ಉಂಟಾಗುವ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಕಷ್ಟವಾಗುತ್ತಿದೆ. ವಾಹನ ಸವಾರರು ಸಹಕರಿಸಿದರೆ ಮಾತ್ರ ಯಾವ ಸಮಸ್ಯೆ ಉಂಟಾಗುವುದಿಲ್ಲ. ಕಾಮಗಾರಿಯೂ ಬೇಗ ಮುಗಿಯಲು ಅನುಕೂಲವಾಗುತ್ತದೆ.| ಮುರುಗೇಶ ಶೆಟ್ಟಿರಾಷ್ಟ್ರೀಯ ಹೆದ್ದಾರಿ ಸೂಪರ್ ವೈಸರ್