

ಕೋಲಾರ: ಮಡೇರಹಳ್ಳಿಯಿಂದ ಮುಳಬಾಗಿಲಿನ ನಂಗಲಿವರೆಗಿನ ರಾಷ್ಟ್ರೀಯ ಹೆದ್ದಾರಿ-75ರ ವ್ಯಾಪ್ತಿಯ ಬ್ಲಾಕ್ ಸ್ಪಾಟ್ಗಳನ್ನು ಸರಿಪಡಿಸುವ ಉದ್ದೇಶದಿಂದ ಜಂಟಿ ಸರ್ವೆ ನಡೆಸಲಾಗುತ್ತಿದ್ದು, ರಸ್ತೆ ಅಪಘಾತ ತಡೆಯಲು ಕೈಗೊಂಡ ಕ್ರಮದ ಬಗ್ಗೆ ಎರಡು ತಿಂಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.
ರಸ್ತೆ ಅಪಘಾತ ನಿಯಂತ್ರಿಸಲು ಬ್ಲಾಕ್ ಸ್ಪಾಟ್ಗಳ ಪರಿಶೀಲನೆ ನಡೆಸಬೇಕೆಂದು ನ.9ರಂದು ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗಿದ್ದ ಹಿನ್ನೆಲೆಯಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಸೋಮಶೇಖರ್ ಅವರೊಂದಿಗೆ ಬ್ಲಾಕ್ ಸ್ಪಾಟ್ಗಳನ್ನು ವೀಕ್ಷಣೆ ಮಾಡಿ ಮಾತನಾಡಿದರು.
ರಸ್ತೆಯ ಗುಂಡಿಗಳನ್ನು ಗುಣಾತ್ಮಕವಾಗಿ ಮುಚ್ಚಬೇಕು, ಅಪಾಯಕಾರಿ ತಿರುವುಗಳ ಬಳಿ ವಾಹನ ಚಾಲಕರ ಅನುಕೂಲಕ್ಕಾಗಿ ಸೂಚನಾ ಫಲಕ ಅಳವಡಿಸಬೇಕು, ಅಗತ್ಯವಿರುವ ಕಡೆ ಹೈಮಾಸ್ಟ್ ದೀಪ ಅಳವಡಿಸುವಂತೆ ಸೂಚಿಸಲಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಸೋಮಶೇಖರ್ ಮಾತನಾಡಿ, 2006ಲ್ಲಿ ಚತುಷ್ಪಥ ರಸ್ತೆ ನಿರ್ವಣದ ಡಿಪಿಆರ್ನಂತೆ ರಸ್ತೆ ನಿರ್ಮಾಣ ಮಾಡಲಾಗಿದೆ. ರಸ್ತೆ ಸುರಕ್ಷತಾ ಸಮಿತಿಯಲ್ಲಿ ತೆಗೆದುಕೊಂಡ ತೀರ್ವನದಂತೆ ಪವನ್ ಕಾಲೇಜು ಬಳಿ, ಟಮಕ ಬಳಿ ಪಾದಚಾರಿ ಮೇಲ್ಸೇತುವೆ, ಜಿಲ್ಲಾಡಳಿತ ಭವನದ ಮುಂಭಾಗ ಸೇವಾ ರಸ್ತೆ, ಕೊಂಡರಾಜನಹಳ್ಳಿಯಲ್ಲಿ ಸೇವಾ ರಸ್ತೆ ವಿಸ್ತರಣೆ ಮಾಡಲಾಗಿದೆ. ಹಾಲಿ ಗುರುತಿಸಿರುವ ಬ್ಲಾಕ್ ಸ್ಪಾಟ್ಗಳಲ್ಲಿ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ನಗರಸಭೆ ಆಯುಕ್ತ ಶ್ರೀಕಾಂತ್, ಆರ್ಟಿಒ ಚಂದ್ರಶೇಖರ್ ಇದ್ದರು.
ಒತ್ತುವರಿ ತೆರವಿಗೆ ತಾಕೀತು: ಕೊಂಡರಾಜನಹಳ್ಳಿ ಬಳಿಯ ಸರ್ವೀಸ್ ರಸ್ತೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲವೆಂದು ಗ್ರಾಪಂ ಪಿಡಿಒ ಎಸ್.ಬೈರೆಡ್ಡಿ ಅವರನ್ನು ಜಿಪಂ ಸಿಇಒ ರವಿಕುಮಾರ್ ತರಾಟೆಗೆ ತೆಗೆದುಕೊಂಡರು. ಅನಧಿಕೃತವಾಗಿ ಅಂಗಡಿ ತೆರೆದಿರುವುದರಿಂದ ವಾಹನಗಳಿಗೆ ತೊಂದರೆಯಾಗುವುದರ ಜತೆಗೆ ಅಪಘಾತಗಳಾಗುತ್ತಿವೆ ಎಂದು ರೈತಸಂಘದ ಮುಖಂಡ ಕೆ.ನಾರಾಯಣಗೌಡ ದೂರಿದ್ದರಿಂದ ಪಿಡಿಒ ವಿರುದ್ಧ ಗರಂ ಆದ ಸಿಇಒ ವಾರದ ಒಳಗೆ ಒತ್ತುವರಿ ತೆರವುಗೊಳಿಸುವಂತೆ ತಾಕೀತು ಮಾಡಿದರು.
ಹೆದ್ದಾರಿಯಲ್ಲಿ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಿ ಅಪಘಾತ ತಪ್ಪಿಸಲು ಅಲ್ಪಾವಧಿ ಮತ್ತು ದೀರ್ಘಾವಧಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಒಟ್ಟು 28 ಬ್ಲಾಕ್ ಸ್ಪಾಟ್ಗಳಿದ್ದು, ಅವುಗಳನ್ನು ಕಾಲಮಿತಿಯಲ್ಲಿ ದುರಸ್ತಿಗೊಳಿಸಲಾಗುವುದು. ಪ್ರಾದೇಶಿಕ ಸಾರಿಗೆ ಅಧಿಕಾರಿ, ಎಸ್ಪಿ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು. | ಸೋಮಶೇಖರ್, ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಅವೈಜ್ಞಾನಿಕ ರಸ್ತೆ ತಿರುವು ಹಾಗೂ ಅಂಡರ್ ಪಾಸ್ ನಿರ್ವಿುಸಲಾಗಿದೆ. ಸರ್ವೀಸ್ ರಸ್ತೆಗಳನ್ನು ಸರಿಯಾಗಿ ನಿರ್ವಿುಸಿಲ್ಲ. ಅಪಘಾತ ಸಂಭವಿಸಿದಾಗ ಜನರು ನಮ್ಮನ್ನು ಹೊಣೆ ಮಾಡುವುದು ಎಷ್ಟು ಸರಿ. | ಕಾರ್ತಿಕ್ ರೆಡ್ಡಿ, ಎಸ್ಪಿ ಕೋಲಾರ