

ಬಸವಕಲ್ಯಾಣ: ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶಾಸಕ ಶರಣು ಸಲಗರ ನೇತೃತ್ವದಲ್ಲಿ ಹಮ್ಮಿಕೊಂಡ ಎರಡು ದಿನದ ಹೊನಲು ಬೆಳಕಿನ ರಾಷ್ಟ್ರಮಟ್ಟದ ಪುರುಷ ಮತ್ತು ಮಹಿಳಾ ವಾಲಿಬಾಲ್ ಪಂದ್ಯಾವಳಿಗೆ ಭಾನುವಾರ ರಾತ್ರಿ ಅದ್ದೂರಿ ಚಾಲನೆ ನೀಡಲಾಯಿತು.
ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿ ಆಶಯದಂತೆ ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ.
ಹುಬ್ಬಳ್ಳಿಯ ರೈಲ್ವೆ, ಮುಂಬೈನ ಇನ್ಕಂ ಟೆಕ್ಸ್, ವಿಜಯವಾಡಾದ ರೈಲ್ವೆ, ಚೆನ್ನೈನ ಎಂಇಜಿ ಐಸಿಎಫ್ ತಂಡ ಮತ್ತು ಮಂಗಳೂರು ನಗರ ಸೇರಿ 6 ಪುರುಷ ತಂಡ, ಮೈಸೂರಿನ ಸ್ಪೋರ್ಟ್ಸ್ ಹಾಸ್ಟೆಲ್, ಮುಂಬೈನ ಸೆಂಟ್ರಲ್ ರೈಲ್ವೆ, ಧಾರವಾಡ ರೈಲ್ವೆ ತಂಡ ಹಾಗೂ ನಾಗಪುರ ಸೇರಿ 4 ಮಹಿಳಾ ತಂಡಗಳಿದ್ದು, ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ವಿಶೇಷ.
ಆಯೋಜಕ ಶಾಸಕ ಶರಣು ಸಲಗರ ಮಾತನಾಡಿ, ಯುವ ಸಮೂಹದಲ್ಲಿ ಕ್ರೀಡಾಸಕ್ತಿ ಬೆಳೆಸುವ ಮೂಲ ಉದ್ದೇಶದಿಂದ ಈ ಪಂದ್ಯ ಆಯೋಜಿಸಲಾಗಿದ್ದು, ಜಾತ್ರಾ ಮಹೋತ್ಸವ ನಿಮಿತ್ತ ಪ್ರತಿ ವರ್ಷ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಯಶಸ್ವಿ ಕ್ರೀಡಾಪಟುಗಳನ್ನು ಜಗತ್ತಿನಲ್ಲಿ ಜನರು ಪ್ರೀತಿಸುತ್ತಾರೆ. ಓಲಂಪಿಕ್ ಕ್ರೀಡಾಕೂಟದಲ್ಲಿ ಚೀನಾ ಅಮೆರಿಕಗಿಂತಲೂ ಹೆಚ್ಚು ಚಿನ್ನದ ಪದಕಗಳನ್ನು ಪಡೆಯಲು ಐದು ಸಾವಿರ ಕ್ರೀಡಾ ಶಾಲೆಗಳನ್ನು ತೆರೆದಿದೆ. ನಮ್ಮಲ್ಲಿಯೂ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುವುದರ ಜತೆಗೆ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಮನೋಭಾವ ಎಲ್ಲರಲ್ಲಿ ಬೆಳೆಯಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಬಾಬು ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಸವ ಜಯಂತಿ ನಿಮಿತ್ತ ರಾಷ್ಟ್ರಮಟ್ಟದ ಬಾಲಿಬಾಲ್ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಮಾಜಿ ಶಾಸಕ ಎಂ.ಜಿ ಮುಳೆ ಮಾತನಾಡಿ, ಕ್ರೀಡೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಶಾಸಕ ಸಲಗರ ಅವರು ಈ ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ದಾರೆ. ಅವರ ಕಾಳಜಿ ಹಾಗೂ ಯೋಜನೆ ರೂಪಿಸಿದ ಸುಭಾಷ ಹೊಳಕುಂದೆ ಹಾಗೂ ತಂಡದ ಕಲ್ಪನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಹಸೀಲ್ದಾರ್ ಸಾವಿತ್ರಿ ಸಲಗರ ಮಾತನಾಡಿ, ಸದೃಢ ದೇಹದಲ್ಲಿ ಒಳ್ಳೆಯ ಮನಸ್ಸು ಇರುತ್ತದೆ. ಈ ಎರಡು ಇರಬೇಕಾದರೆ ಕ್ರೀಡೆ ಅಗತ್ಯವಾಗಿದೆ. ಹೀಗಾಗಿ ಯುವ ಸಮೂಹ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗ್ರೇಡ್-2 ತಹಸೀಲ್ದಾರ್ ಪಲ್ಲವಿ ಬೆಳಕೆರೆ, ಬಿಡಿಪಿಸಿ ಅಧ್ಯಕ್ಷ ಅನೀಲ ರಗಟೆ, ಬಸವೇಶ್ವರ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸುಭಾಷ ಹೊಳಕುಂದೆ, ಬಿಡಿಪಿಸಿ ಉಪಾಧ್ಯಕ್ಷ ಅಶೋಕ ನಾಗರಾಳೆ, ಕಾರ್ಯದರ್ಶಿ ರೇವಣಪ್ಪ ರಾಯವಾಡೆ, ಸಹ ಕಾರ್ಯದಶರ್ಿ ಬಸವರಾಜ ಬಾಲಕಿಲೆ, ನಿರ್ದೇಶಕ ಮಲ್ಲಿಕಾರ್ಜುನ ಕುರುಕೋಟೆ, ಜಗನ್ನಾಥ ಖೂಬಾ, ಮಲ್ಲಿಕಾರ್ಜುನ ಚಿರಡೆ ಉಪಸ್ಥಿತರಿದ್ದರು. ಮುಖಂಡ ಮನೋಹರ ಮೈಸೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ ಜಡಗೆ ಹಾಗೂ ಮಹೇಶ ಮುಳೆ ನಿರೂಪಣೆ ಮಾಡಿದರು.